ಎಲ್ಲಾ ವರ್ಗದ ಬಡ ಜನರಿಗೆ ಸವಲತ್ತು ಸಿಗುವಂತೆ ಎಚ್ಚರ ವಹಿಸಬೇಕು: ಶೋಭಾ ಕರಂದ್ಲಾಜೆ

Update: 2018-07-13 17:14 GMT

ಮೂಡಿಗೆರೆ, ಜು.13: ಪ್ರಧಾನಿ ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬಂದ ಕ್ಷಣದಿಂದಲೇ ದೇಶದಲ್ಲಿ ಬಡ ಜನರು ಯಾವ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದಾರೆಂದು ಸರ್ವೇ ನಡೆಸುವ ಮೂಲಕ ವಿವಿಧ ಯೋಜನೆಗಳನ್ನು ಬಿಡುಗಡೆಗೊಳಿಸಿ ಅರ್ಹ ಫಲಾನುಭಗಳಿಗೆ ವಿತರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಜೇಸಿ ಭವನದಲ್ಲಿ ತಾಲೂಕು ಪಂಚಾಯತ್ ವತಿಯಿಂದ ಏರ್ಪಡಿಸಿದ್ದ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2011ರಲ್ಲಿ ಸರ್ವೇ ನಡೆಸುವ ಮೂಲಕ ದೇಶದ ಬಡ ಜನರ ಸಂಕಷ್ಟ ಅರಿತುಕೊಂಡು ಫಸಲ್ ಭೀಮಾ, ಕೃಷಿ ವಿಕಾಸ, ಗ್ರಾಮೀಣ ಕೌಶಲ್ಯ, ಆದಶ ಗ್ರಾಮ, ಸ್ವಚ್ಛಭಾರತ್, ಉಜ್ವಲ ಯೋಜನೆ ಸೇರಿದಂತೆ ಅನೇಕ ಯೋಜನೆಯನ್ನು ಜಾರಿಗೊಳಿಸಿದ್ದರಿಂದ ಬಡ ಜನರು ಅನುಕೂಲ ಪಡೆದಿದ್ದಾರೆ. ಈಗಾಗಲೇ ದೇಶದಲ್ಲಿ 7.5 ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಾಣ, 4 ಕೋಟಿ ಮನೆಗಳಿಗೆ ಅಡುಗೆ ಅನಿಲ ಪಡೆದಿದ್ದಾರೆ ಎಂದು ಹೇಳಿದರು. 

ಕೇಂದ್ರ ಸರಕಾರದ ಯಾವುದೇ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸುವಾಗ ಅವರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಕೇಂದ್ರದ ಕೆಲ ಯೋಜನೆ ಸರಿಯಾಗಿ ತಲುಪುತ್ತಿಲ್ಲ ಎಂಬುದರ ಬಗ್ಗೆ ತನಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರದಿಂದ ಬಂದ ಅನುದಾನವನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಒಂದು ವಾರದಲ್ಲಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಅನಿಲ ಗ್ಯಾಸ್‍ಗಾಗಿ ಯಾವುದೇ ರೀತಿಯ ಹಣ ಪಡೆದುಕೊಳ್ಳಬಾರದು. ಅಲ್ಲದೇ ಜಾತಿ, ಧರ್ಮದ ಆಧಾರದ ಮೇಲೆ ಸವಲತ್ತು ನೀಡಬಾರದು. ಎಲ್ಲಾ ವರ್ಗದ ಬಡ ಜನರಿಗೆ ಸವಲತ್ತು ಸಿಗುವಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಅತಿಯಾಗಿ ಮಳೆ ಬಿದಿದ್ದರಿಂದ ರೈತರ ಬೆಳೆನಾಶ, ರಸ್ತೆ, ಚರಂಡಿ, ಸೇತುವೆಗಳು ಹಾಳಾಗುತ್ತಿವೆ. ಈ ಬಗ್ಗೆ ರಾಜ್ಯ ಸರಕಾರ ಗಮನ ಹರಿಸುತ್ತಿಲ್ಲ ಹಾಗಾಗಿ ಕೇಂದ್ರದಿಂದ ಹಣ ಬಿಡುಗಡೆಗೊಳಿಸುವಂತೆ ಹಾಗೂ ಇಲ್ಲಿನ ಬೆಳೆಗಾರರ ಸಮಸ್ಯೆ ಪಡಿಹರಿಸುವಂತೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. 

ಆರಂಭದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಯನ್ನು ಪಡೆದ ಫಲಾನುಭವಿಗಳು, ಮಳೆಗಾಲದಲ್ಲಿ ಸೌದೆ ಉರಿಯುವುದಿಲ್ಲ. ಸಮಯಕ್ಕೆ ಸರಿಯಾಗಿ ಅಡುಗೆ ಮಾಡಲು ಸಾಧ್ಯವಾಗದೇ ಮಕ್ಕಳು ಹಸಿದುಕೊಂಡು ಶಾಲೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಗ್ಯಾಸ್ ಬಳಕೆಯಿಂದ ಸಮಸ್ಯೆ ಬಗೆಹರಿದಿದೆ. ಶೌಚಾಲಯವಿಲ್ಲದೆ ಪರಿಸರ ನಾಶವಾಗಿತ್ತು. ಇದೀಗ ಶೌಚಾಲಯ ನಿರ್ಮಾಣವಾದ ಬಳಿಕ ನೆಂಟರು ಮನೆಗೆ ಬರುತ್ತಾರೆ. ಪರಿಸರ ಸ್ವಚ್ಛವಾಗಿದೆ. ಕೃಷಿ ಹೊಂಡ ಮಾಡಿಕೊಂಡಿದ್ದರಿಂದ ಕೃಷಿಗೆ ಅನುಕೂಲವಾಗಿದೆ ಎಂದು ಕೇಂದ್ರದ ಸವಲತ್ತು ಪಡೆದ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದರು. 

ಈ ವೇಳೆ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಕೇಂದ್ರ ಸರಕಾರದ ಸವಲತ್ತುಗಳನ್ನು ವಿತರಿಸಲಾಯಿತು.

ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ, ಜಿ.ಪಂ. ಸದಸ್ಯರಾದ ಸುಧಾ ಯೋಗೇಶ್, ಅಮಿತಾ ಮುತ್ತಪ್ಪ, ತಾ.ಪಂ. ಉಪಾಧ್ಯಕ್ಷೆ ಸವಿತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಕುಮಾರ್, ಸದಸ್ಯರಾದ ಬಿ.ಎಲ್.ದೇವರಾಜು, ಭಾರತೀ ರವೀಂದ್ರ, ಪ್ರಮಿಳಾ,  ಚಿಕ್ಕಮಗಳೂರು ನಗರಸಭೆ ಸದಸ್ಯ ತಮ್ಮಣ್ಣ, ದುಂಡುಗ ಪ್ರಮೋದ್, ಹಳಸೆ ಶಿವಣ್ಣ, ದೀಪಕ್ ದೊಡ್ಡಯ್ಯ, ವೆಂಕಟ ಸುಬ್ಬಯ್ಯ, ಸುಂದರೇಶ್, ಗಜೇಂದ್ರ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News