×
Ad

'ಕುಮಾರಸ್ವಾಮಿ ನಾಟ್ ಮೈ ಸಿಎಂ' ಎಂದು ಇಡೀ ರಾಜ್ಯದ ಜನರಿಗೆ ಅನಿಸಿದೆ: ಸಂಸದೆ ಶೋಭಾ

Update: 2018-07-13 22:48 IST

ಚಿಕ್ಕಮಗಳೂರು, ಜು.12: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕರಾವಳಿ ಸೇರಿದಂತೆ ಇಡೀ ರಾಜ್ಯದಲ್ಲಿ ನಾಟ್ ಮೈ ಸಿಎಂ ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಾಗಿನಿಂದ ರಾಜ್ಯದ ಜನತೆಗೆ ಹೀಗೆ ಅನಿಸಿದೆ. ಅವರ ಕಾರ್ಯವೈಖರಿಯೂ ಜನಪರವಾಗಿಲ್ಲ ಎಂದು ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಕರಾವಳಿ ಭಾಗದ ಇಬ್ಬರು ಯುವಕರು ಫೇಸ್‍ಬುಕ್‍ನಲ್ಲಿ ಎಚ್.ಡಿ.ಕುಮಾರಸ್ವಾಮಿ ನಾಟ್ ಮೈ ಸಿಎಂ ಎಂದು ಪೋಸ್ಟ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಕುಮಾರಸ್ವಾಮಿ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆಂದು ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಸಾಲಮನ್ನಾದ ಬಗ್ಗೆ ಸಿಎಂ ಸ್ಪಷ್ಟ ನಿಲುವು ಹೊಂದಿಲ್ಲ ಎಂದರು.

ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಮಳೆಯಿಂದ ಜೀವಹಾನಿ, ಮನೆಹಾನಿ, ತೋಟಕ್ಕೆ ಹಾನಿಯಾಗಿದೆ. ಪರಿಹಾರ ನೀಡುವ ಬಗ್ಗೆ ಸರಕಾರಕ್ಕೆ ಸ್ಪಷ್ಟತೆಯಿಲ್ಲ. ಸಿ.ಎಂ. ಓಟ್‍ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಮನಗರ, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗೆ ಮಾತ್ರ ಸಿ.ಎಂ. ಕುಮಾರಸ್ವಾಮಿ ಬಜೆಟ್‍ನಲ್ಲಿ ಅನುದಾನ ನೀಡಿದ್ದಾರೆ. ಉಳಿದ ಜಿಲ್ಲೆಗೆ ನೀಡಿಲ್ಲ. ಉಳಿದ ಜಿಲ್ಲೆಗಳಲ್ಲಿ ಬಿಜೆಪಿ ಗೆದ್ದಿದೆ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ತಕ್ಷಣ ಈ ಧೋರಣೆಯನ್ನು ಕೈ ಬಿಡಬೇಕು, ಅವರು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದರು.

ಚಿಕ್ಕಮಗಳೂರು ನಗರದ ಬಿಜೆಪಿ ಮುಖಂಡ ಮುಹಮ್ಮದ್ ಅನ್ವರ್ ಕೊಲೆಯಾಗಿ ತಿಂಗಳು ಕಳೆದಿದೆ. ತನಿಖೆ ಮುಂದುವರಿಸಬೇಕು, ಅಪರಾಧಿಗಳನ್ನು ಹಿಡಿಯಬೇಕು ಎಂಬ ಕನಿಷ್ಠ ಜ್ಞಾನವೂ ಸರಕಾರಕ್ಕಿಲ್ಲ. ಜನಪರ ಕೆಲಸವನ್ನು ಸರಕಾರ ಮಾಡುತ್ತಿಲ್ಲ. ಕೂಡಲೇ ಅನ್ವರ್ ಕೊಲೆಗಾರರನ್ನು ಹಿಡಿದು ಶಿಕ್ಷಿಸಬೇಕೆಂದು ಆಗ್ರಹಿಸಿದ ಅವರು, ಹಿಂದಿನ ಸಿದ್ದರಾಮಯ್ಯರವರ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ, ಸಂಘ ಪರಿವಾರದವರ ಕೊಲೆ ಆದರೂ ಅವರು ಸ್ಪಂದನೆ ಮಾಡಲಿಲ್ಲ. ಆದ್ದರಿಂದ ಜನರು ಅವರನ್ನು ಮನೆಗೆ ಕಳಿಸಿದರು. ಅದೇ ಗತೀ ಕುಮಾರಸ್ವಾಮಿಯವರಿಗೂ ಬರುತ್ತೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News