×
Ad

ಶಿವಮೊಗ್ಗ: ಮಳೆ ಹಾನಿಯ ವಿವರ ನೀಡಲು ಡಿಸಿ ಸೂಚನೆ

Update: 2018-07-13 22:57 IST

ಶಿವಮೊಗ್ಗ, ಜು. 13: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಆಸ್ತಿ ಹಾಗೂ ಪ್ರಾಣಹಾನಿ ಹಾಗೂ ಅವುಗಳಿಗೆ ನೀಡಿರುವ ಪರಿಹಾರಧನದ ಕುರಿತು ಸಮಗ್ರ ವಿವರವನ್ನು 2 ದಿನಗಳೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ತಹಶೀಲ್ದಾರ್‌ಗಳಿಗೆ ಸೂಚಿಸಿದ್ದಾರೆ.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಮತ್ತು ಪರಿಹಾರ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಸಾರ್ವಜನಿಕ ಬಳಕೆಯಲ್ಲಿದ್ದು, ಮಳೆಯಿಂದ ಹಾನಿಗೊಳಗಾಗಿರುವ ಕಾಲುಸಂಕಗಳು, ಅವುಗಳ ದುರಸ್ತಿ, ಪುನರ್‌ನಿರ್ಮಾಣ ಮತ್ತಿತರ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಅವರು ಸೂಚಿಸಿದರು.

ಜನ-ಜಾನುವಾರುಗಳ ಮರಣ, ಮನೆ ಆಸ್ತಿಗಳ ಹಾನಿ ಕುರಿತು ಕೂಡಲೇ ಸ್ಥಳ ಪರಿಶೀಲಿಸಿ ಪರಿಹಾರ ವಿತರಿಸಬೇಕು. ಮಳೆಯಿಂದ ಹಾನಿಗೊಳಗಾಗಿರುವ ಶಾಲಾ ಕಟ್ಟಡ, ಅಂಗನವಾಡಿಗಳ ಮಾಹಿತಿಯನ್ನು ಸಲ್ಲಿಸುವಂತೆ ಅವರು ಸೂಚಿಸಿದರು. ಸುಮಾರು 2ಲಕ್ಷ ರೂ.ವರೆಗಿನ ಪರಿಹಾರವನ್ನು ಜಿಲ್ಲಾಡಳಿತದ ವತಿಯಿಂದ ನೀಡಲಾಗುವುದು. ಹೆಚ್ಚಿನ ಪ್ರಮಾಣದ ಪರಿಹಾರಧನದ ಅಗತ್ಯಕ್ಕೆ ಆಯಾ ತಾಲೂಕಿನ ತಹಶೀಲ್ದಾರರು ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಸರಕಾರಕ್ಕೆ ಶಿಫಾರಸು ಮಾಡಿ, ಪರಿಹಾರಧನ ಬಂದ ನಂತರ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ವಿಶೇಷವಾಗಿ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳ ತಹಶೀಲ್ದಾರರು ತಮ್ಮ ತಾಲೂಕಿನಲ್ಲಿ ಪ್ರತಿದಿನ ಬೀಳುತ್ತಿರುವ ಮಳೆ ಹಾಗೂ ಹಾನಿಗಳ ಬಗ್ಗೆ ತ್ವರಿತವಾಗಿ ಮಾಹಿತಿ ನೀಡುತ್ತಿರಬೇಕು. ಇದರಿಂದಾಗಿ ಜಿಲ್ಲಾಡಳಿತದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಜಿಲ್ಲೆಯ ನದಿದಂಡೆಗಳ ಪಾತ್ರಗಳಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ನದಿಪಾತ್ರದ ಜನರು ಕೆಳಗಿಳಿಯದಂತೆ ಹಾಗೂ ಸುರಕ್ಷತಾಕ್ರಮಗಳನ್ನು ಅನುಸರಿಸುವಂತೆ ಅವರು ಸೂಚಿಸಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಸ್ವೀಕರಿಸಲಾದ ಅರ್ಜಿಗಳನ್ನು ತ್ವರಿತವಾಗಿ ವಿಲೇಮಾಡಬೇಕು. ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಈಗಾಗಲೇ ಮರಣ ಹೊಂದಿರುವವರಿಗೂ ವೃದ್ಧಾಪ್ಯವೇತನ ಪಾವತಿಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಇದನ್ನು ಸರಿಪಡಿಸುವಂತೆ ತಹಶೀಲ್ದಾರರಿಗೆ ಸೂಚಿಸಿದ ಅವರು, ಕಳೆದ 2-3 ತಿಂಗಳುಗಳಿಂದ ಪಿಂಚಣಿ ಪಾವತಿಯಲ್ಲಿ ವಿಳಂಬವಾಗುತ್ತಿದ್ದು, ಮನಿಯಾರ್ಡರ್ ಮೂಲಕ ವಿತರಿಸಲಾಗುತ್ತಿದೆ. ಆಗಿರುವ ತಾಂತ್ರಿಕ ಅಡಚಣೆಯನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಬ್ಯಾಂಕ್ ಖಾತೆ ಮೂಲಕವೇ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.

ಜಿಲ್ಲೆಯಲ್ಲಿ ಸಂಭವಿಸಿರಬಹುದಾದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಪ್ರಥಮ ಆದ್ಯತೆಯನ್ನಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಮೃತ ರೈತರ ಪತ್ನಿಯರಿಗೆ ವಿಧವಾ ವೇತನ, ಮಕ್ಕಳ ಶೈಕ್ಷಣಿಕ ಚಟುವಟಿಕೆ ನಿರಂತರವಾಗಿರಲು ಶಾಲಾ ದಾಖಲಾತಿ, ಪರಿಹಾರಧನ ವಿತರಣೆ ಹಾಗೂ ಆರೋಗ್ಯ ಇಲಾಖೆಯಿಂದ ಆರೋಗ್ಯ ಕಾರ್ಡ್ ವಿತರಿಸಲು ಕ್ರಮಕೈಗೊಳ್ಳುಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ. ರಾಕೇಶ್‌ಕುಮಾರ್, ಅಪರ ಡಿಸಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ದಾಸೇಗೌಡ, ನಾಗರಾಜ್ ಸಿಂಗ್ರೇರ್, ಜಂಟಿ ಕೃಷಿ ನಿರ್ದೇಶಕ ಡಾ.ಕಿರಣ್ ಕುಮಾರ್, ತೋಟಗಾರಿಕೆ ಉಪನಿರ್ದೇಶಕ ಡಾ.ಯೋಗೀಶ್ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News