×
Ad

ಮಹಾಮಳೆಗೆ ಮಡಿಕೇರಿ -ಮಂಗಳೂರು ರಸ್ತೆಗೆ ಹಾನಿ: ಭೂಕುಸಿತ ಸಂಭವ

Update: 2018-07-13 23:42 IST

ಮಡಿಕೇರಿ, ಜು.13: ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಡಿಕೇರಿ-ಮಂಗಳೂರು ರಸ್ತೆಗೆ ಹಾನಿಯಾಗಿದ್ದು, ಶುಕ್ರವಾರ ಭೂಕುಸಿತದ ಭೀತಿ ಎದುರಾಗಿತ್ತು.

ಮಂಗಳೂರಿಗೆ ತೆರಳುವ ಮಡಿಕೇರಿ ಸಮೀಪದ ಹೆದ್ದಾರಿಯಲ್ಲಿ ಅಪಾಯಕಾರಿ ಬಿರುಕು ಮೂಡಿದ್ದು, ಬರೆ ಸಹಿತ ಕೆಳಗಿನ ತಗ್ಗಿನ ಪ್ರದೇಶಕ್ಕೆ ರಸ್ತೆ ಕುಸಿಯುವ ಸಾಧ್ಯತೆಗಳಿದೆ. ಮುಂಜಾಗ್ರತಾ ಕ್ರಮವಾಗಿ ರಸ್ತೆಯ ಒಂದು ಬದಿಯಿಂದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಬಿರುಕು ಬಿಟ್ಟಿರುವ ರಸ್ತೆಯ ಬದಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಶಿರಾಡಿಘಾಟ್‌ನಲ್ಲಿ ಬಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರುರುವುದರಿಂದ ಮಡಿಕೇರಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿವೆ.

ಅಧಿಕ ಭಾರ ಹೊತ್ತ ಲಾರಿಗಳ ಸಂಚಾರ ಮತ್ತು ಈ ಹಿಂದೆ ಕೇಬಲ್ ಅಳವಡಿಸಲು ತೋಡಲಾದ ಗುಂಡಿಯಿಂದಾಗಿ ಹೆದ್ದಾರಿಗೆ ಹಾನಿಯಾಗಿರುವುದಲ್ಲದೆ ಇದೀಗ ಸುರಿಯುತ್ತಿರುವ ತೀವ್ರ ಮಳೆಯಿಂದಾಗಿ ರಸ್ತೆ ಉಳಿಯುವ ಸಾಧ್ಯತೆಗಳೇ ಕಡಿಮೆಯಾಗಿದೆ. ಹೆದ್ದಾರಿ ಬಿರುಕು ಬಿಟ್ಟ ಪ್ರದೇಶದ ಬದಿಯಲ್ಲಿ ಅಂದಾಜು 500 ಅಡಿಯಷ್ಟು ಆಳದ ಪ್ರಪಾತವಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಸುಮಾರು 30 ಅಡಿಯಷ್ಟು ಉದ್ದಕ್ಕೂ ರಸ್ತೆ ಬಿರುಕು ಬಿಟ್ಟಿದ್ದು, ಮಳೆ ಮತ್ತೆ ತೀವ್ರಗೊಂಡರೆ ಮಳೆ ನೀರಿನಿಂದ ರಸ್ತೆ ಸುಲಭವಾಗಿ ಪ್ರಪಾತಕ್ಕೆ ಕುಸಿಯುವ ಸಾಧ್ಯತೆಗಳಿವೆ,

ಹೆದ್ದಾರಿಯ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕ ವಾಹನಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಸರಕು ಸಾಗಿಸುವ ಲಾರಿಗಳ ಸಂಚಾರವನ್ನು ನಿಷೇಧಿಸಬೇಕೆಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಹಾನಿ ಪ್ರದೇಶಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News