ಮಡಿಕೇರಿ: ಮರಳು, ಮರದ ದಿಮ್ಮಿಗಳ ಸಾಗಾಣಿಕೆ ನಿಷೇಧ ಕ್ರಮ ಖಂಡಿಸಿ ಪ್ರತಿಭಟನೆ

Update: 2018-07-13 18:19 GMT

ಮಡಿಕೇರಿ, ಜು.13: ಜಿಲ್ಲೆಯಾದ್ಯಂತ ಮರಳು ಮತ್ತು ಮರದದಿಮ್ಮಿಗಳ ಸಾಗಾಣಿಕೆಯನ್ನು ಜು. 3 ರಿಂದ ಆ. 31ರ ವರೆಗೆ ನಿಷೇಧಿಸಿ ಆದೇಶಿಸಿರುವುದನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೊಡಗು ಜಿಲ್ಲಾ ಟಿಂಬರ್ ವರ್ಕರ್ಸ್ ಮತ್ತು ಹೆಡ್‍ಲೋಡರ್ಸ್ ಯೂನಿಯನ್, ಸುಂಟಿಕೊಪ್ಪದ ಮರ ಕೆಲಸ ಮತ್ತು ತಲೆ ಹೊರೆ ಕಾರ್ಮಿಕರ ಸಂಘ ಮತ್ತು ಮರ ವ್ಯಾಪರಿಗಳ ಸಂಘ ಹಾಗೂ ಕ್ರೈನ್ ಮತ್ತು ಲಾರಿ ಮಾಲೀಕರ ಸಂಘದ ಜಂಟಿ ಆಶ್ರಯದಲ್ಲಿ ಪ್ರತಿಭಟಿಸಿದ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಟವನ್ನು ನಿರ್ಭಂದಿಸಿ ಹೊರಡಿಸಿರುವ ಆದೇಶದಿಂದ ಕೆಲಸ ಸ್ಥಗಿತಗೊಂಡಲ್ಲಿ ಲಾರಿ ಮಾಲೀಕರು, ಲಾರಿಚಾಲಕರು, ಕ್ರೈನ್ ಅಪರೇಟರ್ಸ್, ಮರ ಲೋಡ್ ಮಾಡುವ ಕಾರ್ಮಿಕರು ಸೇರಿದಂತೆ ಮರ ಕೆಲಸವನ್ನೆ ನಂಬಿಕೊಂಡಿರುವ ವಿವಿಧ ಹಂತದ ಕಾರ್ಮಿಕರ ಕುಟುಂಬಗಳ ಜೀವನೋಪಾಯಕ್ಕೆ ಆರ್ಥಿಕ ಸಂಕಷ್ಟಗಳು ಎದುರಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಸಿದರು. 

ಜಿಲ್ಲೆಯ ಮರ ವ್ಯಾಪಾರಿಗಳು ತೋಟದ ಮಾಲೀಕರ ತೋಟದಲ್ಲಿ ಬೆಳೆದುನಿಂತ ಕೃಷಿಗೆ ಅಧಿಕ ನೆರಳು ಕೊಡುವ ಮರಗಳನ್ನು ಹಾಗೂ ನೆಟ್ಟು ಬೆಳಸಿದ ಬಳಂಜಿ, ಸಿಲ್ವರ್, ಮತ್ತಿತರ ಮರಗಳನ್ನು ಖರೀದಿಸಿ ಸಂಬಂದಿಸಿದ ಅರಣ್ಯ ಇಲಾಖೆಯ ಮತ್ತು ಜಿಲ್ಲಾಡಳಿತದ ನಿಯಮನುಸಾರ ಒಪ್ಪಿಗೆ ಪಡೆದು ನಾಟಗಳನ್ನಾಗಿ ತುಂಡರಿಸಿ ಸಾಗಾಟ ಮಾಡಲು ಅನುಮತಿ ಸಿಗುವಾಗ ಮೇ ತಿಂಗಳು ಅಂತಿಮಗೊಂಡಿರುತ್ತದೆ. ಆದ್ದರಿಂದ ಆ ಅವಧಿಯಲ್ಲಿ ಮಳೆಗಾಲದ ಪರಿಣಾಮ ಕೆಲವು ಮೃದು ಸ್ವಭಾವದ ಮರಗಳು ಬೇಗನೆ ಹಾಳಾಗುವುದರಿಂದ ಅವುಗಳನ್ನು ಸಕಾಲಕ್ಕೆ ವಿಲೇವಾರಿ ಮಾಡಬೇಕಿದೆ. ಇಲ್ಲದಿದ್ದಲ್ಲಿ ವ್ಯಾಪಾರಸಂಬಂದವಾಗಿ ನಷ್ಟಸಂಭವಿಸಲಿದ್ದು, ತಾವುಗಳು ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು.

ಆದೇಶದಲ್ಲಿ ಉಲ್ಲೇಖಿಸಿರುವಂತೆ 20 ಟನ್ ಮೇಲ್ಪಟ್ಟ ವಾಹನಗಳ ಸಂಚಾರ ನಿಷೇಧಿಸಿಲಾಗಿದೆ. ಆದರೆ ಜಿಲ್ಲೆಯ ಒಳಗಡೆ ಪ್ರವೇಶಿಸುವ ವಾಹನಗಳ ಪೈಕಿ ಸಿಮೆಂಟು, ಕಬ್ಬಿಣ, ಇತ್ಯಾದಿ ಸರಕು ತುಂಬಿದ ವಾಹನಗಳು 40 ಟನ್‍ಗಳಿಗಿಂತಲು ಹೆಚ್ಚಿರುವುದಾಗಿ ಆರೋಪಿಸಿರುವ ಅವರು ಹೊರ ರಾಜ್ಯದ ವಾಹನಗಳ ನಿಷೇದದ ಬಗ್ಗೆ ಉಲ್ಲೇಖಿಸಿಲ್ಲ ಎಂದರು. ಕೇವಲ ವಾಹನ ಸಂಚಾರದಿಂದಲೇ ರಸ್ತೆಗಳು ಹಾಳಾಗಿರುವುದು ಎನ್ನುವುದಕ್ಕಿಂತಲು ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಬಹಳಷ್ಟು ರಸ್ತೆ ಕಾಮಗಾರಿಗಳು ಅತ್ಯಂತ ಕಳಪೆಯಿಂದ ಕೂಡಿರುವುದಾಗಿ ತಿಳಿಸಿದರು.

ಯಾವುದೇ ಮುನ್ನೆಚ್ಚರಿಕೆ ಕೊಡದೆ ತಾವು ನೀಡಿರುವ ಆದೇಶದಿಂದ ಕಾರ್ಮಿಕರಿಗೆ ತೊಂದರೆಯಾಗಲಿದ್ದು, ಮಕ್ಕಳ ವಿದ್ಯಾಭ್ಯಾಸ, ಇನ್ನಿತರ ಕುಟುಂಬ ನಿರ್ವಹಣೆಗಾಗಿ ಮಾಡಿಕೊಂಡಿರುವ ಸಾಲ ಮತ್ತು ವಾಹನ ಸಾಲ, ವಿಮೆ ಇನ್ನಿತರ ಕಂತುಗಳನ್ನು ಕಟ್ಟಲು ಮತ್ತು ನಿತ್ಯೋಪಯೋಗಿ ವಸ್ತುಗಳ ಖರೀದಿಗೆ ಅಡಚಣೆಯಾಗಲಿದೆ. ಆದ್ದರಿಂದ ಸದರಿ ಆದೇಶವನ್ನು ಕಾರ್ಮಿಕ ಕುಟುಂಬಗಳ ರಕ್ಷಣೆಯ ದೃಷ್ಠಿಯಿಂದ ಪುನರ್ ಪರಿಶೀಲಿಸಬೇಕೆಂದು ಮನವಿ ಮಾಡಿದರು. 
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News