ಕೊಡಗಿನಲ್ಲಿ ಮುಂದುವರೆದ ವರ್ಷಧಾರೆ: ತಲಕಾವೇರಿ, ಭಾಗಮಂಡಲದಲ್ಲಿ ದಾಖಲೆ ಮಳೆ

Update: 2018-07-13 18:23 GMT

ಮಡಿಕೇರಿ, ಜು.13: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದ್ದು, ಹಲವೆಡೆಗಳಲ್ಲಿ ಪ್ರವಾಹದಿಂದಾಗಿ ಸಂಪರ್ಕ ವ್ಯವಸ್ಥೆ ಕಡಿತಗೊಂಡು ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾವೇರಿ ಮತ್ತು ಲಕ್ಷ್ಮಣತೀರ್ಥ ನದಿಗಳ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.

ಕಳೆದ ಒಂದು ದಿನದ ಅವಧಿಯಲ್ಲಿ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರ ವ್ಯಾಪಿಯಲ್ಲಿ 6 ಇಂಚಿಗೂ ಹೆಚ್ಚಿನ ಮಳೆಯಾಗಿದ್ದು, ಇಂದು ಮಳೆಯ ಪ್ರಮಾಣ ಕೊಂಚ ಇಳಿಮುಖಗೊಂಡಿದ್ದರು ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ. ಕಾವೇರಿ ನದಿ ಪಾತ್ರದ ನಾಪೋಕ್ಲು, ಬಲಮುರಿ, ಮೂರ್ನಾಡು, ಸಿದ್ದಾಪುರ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದೆ. ಈಗಾಗಲೆ ಕಳೆದ ಸಾಲಿಗಿಂತ ಎರಡು ಪಟ್ಟಷ್ಟು ಮಳೆಯಾಗಿದ್ದು, ತೀವ್ರ ಸ್ವರೂಪದ ಚಳಿಯ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗುತ್ತಿದ್ದು, ಮಂಜಿನ ಹಿನ್ನೆಲೆಯಲ್ಲಿ ಸುರಿಯುತ್ತಿರುವ ಮಳೆ ಜನ ಜೀವನವನ್ನು ದುಸ್ಥರಗೊಳಿಸಿದೆ. ದಟ್ಟ ಮಂಜಿನ ವಾತಾವರಣದಿಂದ ವಾಹನ ಚಾಲನೆ ಕಠಿಣವಾಗಿದ್ದು, ಇಂದು ಮುಂಜಾನೆ ಸರ್ಕಾರಿ ಬಸ್‍ವೊಂದು ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿರುವ ಘಟನೆ ನಡೆದಿದೆ.

ವೀರಾಜಪೇಟೆ ತಾಲೂಕು ವ್ಯಾಪ್ತಿಯ ಶ್ರೀಮಂಗಲ, ಬಾಳೆಲೆ ಪೊನ್ನಪೇಟೆ, ಗೋಣಿಕೊಪ್ಪ ವಿಭಾಗಗಳಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ತಾಲೂಕಿನ ಲಕ್ಷ್ಮಣ ತೀರ್ಥ, ಕದನೂರು ಹೊಳೆಯ ನದಿಯ ಪ್ರವಾಹ ಗದ್ದೆ ಬಯಲುಗಳ ಉದ್ದಕ್ಕೂ ವ್ಯಾಪಿಸಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯುಂಟಾಗಿದೆ. ಪುಷ್ಪಗಿರಿ ತಪ್ಪಲಿನ ಪ್ರದೇಶಗಳು ಸೇರಿದಂತೆ ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಕಿರು ತೊರೆಗಳು ಉಕ್ಕಿ ಹರಿಯುತ್ತಿದ್ದು, ಹಾರಂಗಿ ಜಲಾಶಯ ಈಗಾಗಲೆ ಭರ್ತಿಯಾಗಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇದು ಕೆಆರ್‍ಎಸ್ ಭರ್ತಿಯಾಗುವುದಕ್ಕೆ ಸಹಕಾರಿಯಾಗಲಿದೆ. ಮಡಿಕೇರಿ ನಗರದ ಮಳೆಹಾನಿ ಪ್ರದೇಶಗಳಿಗೆ ಶಾಸಕ ಅಪ್ಪಚ್ಚುರಂಜನ್ ಭೇಟಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ದೋಣಿ ಬಳಕೆ
ನಾಪೋಕ್ಲು ವ್ಯಾಪ್ತಿಯಲ್ಲಿ ಕಾವೇರಿ ನದಿಯಲ್ಲಿ ಪ್ರವಾಹದ ಸ್ಥಿತಿ ಇದ್ದು, ಗ್ರಾಮಸ್ಥರು ಸಂಚಾರಕ್ಕೆ ದೋಣಿಯನ್ನು ಬಳಸುತ್ತಿದ್ದಾರೆ. ಬೇಂಗೂರು ಗ್ರಾಮದ ದೋಣಿಕಡು ಎಂಬಲ್ಲಿ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಮ್ಮೆಮಾಡು ಗ್ರಾಮಪಂಚಾಯತ್ ಹಾಗೂ ಬೇಂಗೂರು ಗ್ರಾಮಪಂಚಾಯತ್ ಗಳ ನಡುವೆ ಕಾವೇರಿ ನದಿ ಪ್ರವಾಹ ಏರಿದ್ದು ಇಲ್ಲಿನ ಕೂಡಕಂಡ ಕುಟುಂಬಸ್ಥರು ಪರಂಬು ಪೈಸಾರಿಯ ಮಂದಿ ಸೇರಿದಂತೆ ಸುಮಾರು 60ಕ್ಕೂ ಅಧಿಕ ಮನೆಗಳ ಮಂದಿ ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಮ್ಮೆಮಾಡು ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಕುಟುಂಬಗಳು ಕಾವೇರಿ ನದಿ ತಟದಲ್ಲಿ ವಾಸವಾಗಿದ್ದು ಸಮೀಪದ ಚೇರಂಬಾಣೆಗೆ ಸಂಪರ್ಕ ಕಲ್ಪಿಸುವ ಬೇಂಗೂರು ಗ್ರಾಮದ ಮೂಲಕ ಸಂಚಾರ ವ್ಯವಸ್ಥೆ ಕೈಗೊಂಡಿದ್ದರು. ವಿವಿಧ ಗ್ರಾಮಗಳಿಗೆ ಪಡಿಯಾಣಿ, ಎಮ್ಮೆಮಾಡು ಹಾಗೂ ಬೇಂಗೂರು ಗ್ರಾಮಗಳ ಕೂಲಿಕಾರ್ಮಿಕರು ಸಾರ್ವಜನಿಕರು ಸುತ್ತು ಬಳಸಿ ಸಾಗುವ ಬದಲು ಮಳೆಗಾಲದಲ್ಲಿ ದೋಣಿಯ ಮೊರೆಹೋಗಿದ್ದು ಇದೀಗ ದೋಣಿ ದುರಸ್ತಿಗೀಡಾಗಿದ್ದು, ನದಿತಟದ ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News