ಕುಶಾಲನಗರ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ

Update: 2018-07-14 12:07 GMT

ಮಡಿಕೇರಿ, ಜು.14: ಬೆಲೆಬಾಳುವ ವಸ್ತುಗಳ ಕಳವುಗೈಯ್ಯುವ ಉದ್ದೇಶದಿಂದ ಮನೆಯಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈದ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶವನ್ನು ಹೊರಡಿಸಿದೆ.

ಕುಶಾಲನಗರ ಸಮೀಪದ ಮಲ್ಲೇನಹಳ್ಳಿ ನಿವಾಸಿಗಳಾದ, ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದ ಹೆಚ್.ಎಸ್.ಶಿವಕುಮಾರ್(22) ಟಿ.ಇ ಶಿವಕುಮಾರ್(21) ಮತ್ತು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕುಮಾರ(19) ಎಂಬವರೇ ಶಿಕ್ಷೆಗೆ ಗುರಿಯಾದವರು.

2016ರ ಫೆಬ್ರವರಿ 11 ರಂದು ರಾತ್ರಿ ಮಲ್ಲೇನಹಳ್ಳಿ ಗ್ರಾಮದ ಮುತ್ತಣ್ಣ ಎಂಬವರಿಗೆ ಸೇರಿದ ಮನೆಗೆ ಕಳವು ಮಾಡುವ ಉದ್ದೇಶದಿಂದ ಆರೋಪಿಗಳು ನುಗ್ಗಿದ್ದಾರೆ. ಆದರೆ ಮನೆಯಲ್ಲಿ ವೃದ್ಧ ಕೊಚ್ಚುಣ್ಣಿ ಹಾಗೂ ಯುವಕ ಅಮೃತಾನಂದ ಎಂಬವರು ಇರುವುದನ್ನು ಗಮನಿಸಿದ ಚೋರರು ಅಮೃತಾನಂದ ಕಳ್ಳತನಕ್ಕೆ ಅಡ್ಡಿಯಾಗಬಹುದೆಂದು ಆತನನ್ನು ಸಿಗರೇಟು ಸೇದುವ ನೆಪದಲ್ಲಿ ಹೊರಕ್ಕೆ ಕರೆದೊಯ್ದಿದ್ದಾರೆ. ಈ ಸಂದರ್ಭ ಆರೋಪಿಗಳಲ್ಲಿ ಒಬ್ಬಾತ ಕೊಚ್ಚುಣ್ಣಿಯ ಕುತ್ತಿಗೆಗೆ ಟವೆಲ್ ಬಿಗಿದು ಹತ್ಯೆಗೈಯ್ದು, ಮನೆಯಲ್ಲಿ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಡಿದ್ದು, ಆದರೆ ಯಾವುದೇ ವಸ್ತುಗಳು ದೊರಕಿರಲಿಲ್ಲ ಎನ್ನಲಾಗಿದೆ.

ಬಳಿಕ ಮನೆಯ ಹೊರಗಿದ್ದ ಅಮೃತಾನಂದನ ಬಳಿ, ಬೆಲೆ ಬಾಳುವ ವಸ್ತುಗಳ ಬಗ್ಗೆ ವಿಚಾರಿಸಿದಾಗ ಆತ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆತನ ಕುತ್ತಿಗೆಗೆ ಟವೆಲ್ ಬಿಗಿದು ಹತ್ಯೆ ಮಾಡಿ, ಮೃತದೇಹವನ್ನು ಚರಂಡಿಯೊಳಗೆ ಹಾಕಿ ಅಡಿಕೆ ಸೋಗೆಗಳನ್ನು ಮುಚ್ಚಿ ಮೂವರು ಚೋರರು ಪರಾರಿಯಾಗಿದ್ದರು.
ಬಳಿಕ ಹತ್ಯಾ ಪ್ರಕರಣದ ಬಗ್ಗೆ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಾಗಿ, ತನಿಖೆ ಕೈಗೆತ್ತಿಕೊಂಡ ವೃತ್ತ ನಿರೀಕ್ಷಕ ಸಂದೇಶ್ ಕುಮಾರ್ ಎಸ್.ಎನ್. ರವರು ಮೂವರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪವನೇಶ್, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಗಲ್ಲು ಶಿಕ್ಷೆಯನ್ನು ವಿಧಿಸಿ ತೀರ್ಪನ್ನು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News