ಖಾಸಗಿ ವಿಕಲಚೇತನ ಶಾಲೆಗಳಿಗೆ ಈ ಸಾಲಿನಿಂದಲೇ ಉಚಿತ ಬಿಸಿಯೂಟ: ಸಿ.ಎಂ ಕುಮಾರಸ್ವಾಮಿ

Update: 2018-07-14 14:47 GMT

ಬೆಂಗಳೂರು, ಜು.14: ವಿಕಲಚೇತನ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಖಾಸಗಿ ಶಾಲೆಗಳಿಗೆ ಈ ಸಾಲಿನಿಂದಲೇ ಉಚಿತ ಬಿಸಿಯೂಟ ಹಾಗೂ ಹಾಲನ್ನು ಕೊಡಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಜಾರಿಗೆ ತರಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶನಿವಾರ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಮಕ್ಕಳ, ಪೋಷಕರ, ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಹಾಗೂ ಸೇವಾ ಸಂಸ್ಥೆಗಳ ಮುಖ್ಯಸ್ಥರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ನನಗೆ ವಿಕಲಚೇತನ ಮಕ್ಕಳ ಕುರಿತು ವಿಶೇಷ ಕಾಳಜಿಯಿದೆ. ಈ ಹಿಂದೆಯೂನಾನು ಮುಖ್ಯಮಂತ್ರಿಯಾಗಿದ್ದಾಗ ವಿಕಲಚೇತನರು ವಿಧಾನಸೌಧಕ್ಕೆ ನೇರವಾಗಿ ಬಂದು ಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದ್ದೆ. ಹಾಗೂ ನೌಕರಿಗಾಗಿ ಬೇಡಿಕೆಯಿಟ್ಟು ನನ್ನ ಬಳಿಗೆ ಬಂದ ಬಹುತೇಕ ವಿಕಲಚೇತನರಿಗೆ ಕೆಲಸ ಕೊಡಿಸಿದ್ದೇನೆ ಎಂದು ಅವರು ತಿಳಿಸಿದರು.

ಈ ಸಾಲಿನ ಬಜೆಟ್‌ನಲ್ಲಿ ವಿಕಲಚೇತನರಿಗೆ ವಿಶೇಷ ಸೌಲಭ್ಯ ಕಲ್ಪಿಸಿದ್ದೇನೆ. ವಿಕಲಚೇತನರು ಮಾಡಿರುವ ಸಾಲವನ್ನು ಮನ್ನಾ ಮಾಡಲು ಆದೇಶಿಸಿದ್ದೇನೆ. 20ಎಕರೆ ಜಾಗದಲ್ಲಿ ವಿಕಲಚೇತನರಿಗೆ ಉದ್ಯೋಗ ತರಬೇತಿ ಹಾಗೂ ಪುನರ್‌ವಸತಿ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಹಾಗೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ವಿಕಲಚೇತನರಿಗೆ ವಿದ್ಯಾರ್ಥಿ ವೇತನ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ವಿಕಲಚೇತನರಿಗೆ ಬಜೆಟ್‌ನಲ್ಲಿ ಮಂಡಿಸಿರುವ ಸೌಲಭ್ಯಗಳನ್ನು ಹೊರತು ಪಡಿಸಿಯೂ ಮತ್ತಷ್ಟು ಸಹಕಾರವನ್ನು ನೀಡಲು ನಾನು ಸದಾ ಸಿದ್ಧನಿದ್ದೇನೆ. ವಿಕಲಚೇತರಿಗೆ ವಿವಿಧ ಸಂಸ್ಥೆ-ಮಂಡಳಿಗಳಿಂದ ಸಿಗುವ ಸೌಲಭ್ಯಗಳಲ್ಲಿ ಕಟ್ಟುನಿಟ್ಟಿನ ಪಾರದರ್ಶಕತೆ ಇರಬೇಕು. ಇಂತಹ ವಿಷಯದಲ್ಲಿ ಭ್ರಷ್ಟಾಚಾರ ನಡೆಸಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ವಸತಿ ಸಚಿವ ಯು.ಟಿ.ಖಾದರ್, ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಚ್.ವಿ.ಗೋಪಾಲಪ್ಪ, ಪ್ರಧಾನ ಕಾರ್ಯದರ್ಶಿ ವಸಂತ್‌ ಕುಮಾರ್ ಶೆಟ್ಟಿ, ಖಜಾಂಚಿ ಅಪ್ಪುರಾವ್ ಮತ್ತಿತರರಿದ್ದರು.

ವಿಕಲಚೇತನರ ಒಲಿಂಪಿಕ್ಸ್ ಕ್ರೀಡಾಕೂಟ
ರಾಜ್ಯದಲ್ಲಿ ವಿಕಲಚೇತನ ಕ್ರೀಡಾಪಟುಗಳು ಸಾಕಷ್ಟು ಮಂದಿಯಿದ್ದು, ಆ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು ಸರಕಾರದ ಕರ್ತವ್ಯ. ಹೀಗಾಗಿ ರಾಜ್ಯದ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಕಲಚೇತನ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಲಾಗುವುದು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶೀಘ್ರವೆ ಸಭೆ ನಡೆಸಲಾಗುವುದು.
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

ಪ್ರಮುಖ ಬೇಡಿಕೆಗಳು
-ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೇರ್ಪಡಿಸಿ ಸ್ವತಂತ್ರ ಇಲಾಖೆಯಾಗಿ ಘೋಷಿಸಬೇಕು.
-ವಿಕಲಚೇತನರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.
-ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಪ್ರತ್ಯೇಕ ಬಜೆಟ್ ನಿಗದಿ ಪಡಿಸಬೇಕು.
-ವಿಕಲಚೇತನರ ಮತ್ತು ಬುದ್ಧಿಮಾಂಧ್ಯರ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರಿಗೆ ಆರ್ಥಿಕ ಸೌಲಭ್ಯ, ಸೇವಾ ಭದ್ರತೆ ಹಾಗೂ ನಿವೃತ್ತಿ ವೇತನ ಘೋಷಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News