×
Ad

ಮಾಧ್ಯಮದವರಿಗೆ ನಮ್ಮ ಮೇಲೆ ಯಾಕಿಷ್ಟು ಅಸೂಯೆ: ಸಿಎಂ ಕುಮಾರಸ್ವಾಮಿ ಪ್ರಶ್ನೆ

Update: 2018-07-14 18:42 IST

ಬೆಂಗಳೂರು, ಜು.14: ಮಾಧ್ಯಮದವರಿಗೆ ನಮ್ಮ ಮೇಲೆ ಯಾಕಿಷ್ಟು ಅಸೂಯೆ. ಪ್ರಧಾನಿ ನರೇಂದ್ರ ಮೋದಿಯವರು ಹನ್ನೊಂದು ಬಾರಿ ಇಂಧನದ ಬೆಲೆ ಏರಿಕೆ ಮಾಡಿದ್ದರು. ಅಬಕಾರಿ ಸುಂಕವನ್ನು 9 ರೂ.ನಿಂದ 19 ರೂ.ಗೆ ಏರಿಕೆ ಮಾಡಿದರು. ಅಡುಗೆ ಅನಿಲದ ಬೆಲೆಯನ್ನು ಗಗನಕ್ಕೇರಿಸಿದರು. ಆದರೂ ಅವರ ವಿರುದ್ಧ ಚಕಾರ ಕೂಡ ಎತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಶನಿವಾರ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಸ್ಪಂದನ-2018 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕೇವಲ ಒಂದು ರೂ. ಹೆಚ್ಚಿಸಿದ್ದಕ್ಕೆ ಮಾಧ್ಯಮಗಳು ಮಂಗಳೂರಿನ ಮೀನುಗಾರ ಮಹಿಳೆಯರ ಕೈಗೆ ಭಿತ್ತಿಪತ್ರ ಕೊಟ್ಟು ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿಯಲ್ಲವೆಂದು ಹೇಳಿಸುತ್ತಿವೆ. ಆ ಮೂಲಕ ಜನತೆ ಹಾಗೂ ನನ್ನ ಮಧ್ಯೆ ಕಂದಕ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಅಧಿಕಾರ ವಹಿಸಿಕೊಂಡು ಎರಡು ತಿಂಗಳಾಗಿಲ್ಲ. ಅಷ್ಟರಲ್ಲೆ ಮಾಧ್ಯಮಗಳು ನನ್ನ ಬಗ್ಗೆ ಜನತೆಗೆ ತಪ್ಪು ಸಂದೇಶ ನೀಡುತ್ತಿವೆ ಎಂದ ಅವರು, ನನ್ನ ವಿರುದ್ಧ ಮಾತ್ರ ನಿರಂತರವಾಗಿ ಅಪಪ್ರಚಾರ ನಡೆಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಹಿಂದಿನ 70 ರ್ಷಗಳ ಆಡಳಿತದಲ್ಲಿ ಆಗಿರುವ ಸಮಸ್ಯೆಗಳನ್ನು ಎರಡು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ನನ್ನ ಮೇಲೆ ಹಾಕುವುದು ಸರಿಯಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರ ಪಡೆದಿರುವುದು ವಿಧಾನಸೌಧದಲ್ಲಿ ಕೂರುವುದಕ್ಕಲ್ಲ. ದಕ್ಷಿಣಕನ್ನಡ , ಉಡುಪಿ, ಕೊಡಗು ಸೇರಿದಂತೆ 30 ಜಿಲ್ಲೆಗಳಿಗೂ ಭೇಟಿ ನೀಡಿ ಜನತೆಯ ಮಧ್ಯೆದಲ್ಲಿಯೆ ಕುಳಿತು ಅವರ ಸಮಸ್ಯೆಯನ್ನು ಆಲಿಸಿ, ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರೈತರ ಸಾಲಮನ್ನಾ ವಿಚಾರದಲ್ಲಿ ನಾನು ತಮಾಷೆ ಮಾಡುವುದಕ್ಕೆ ಆಗುತ್ತದೆಯೇ ? ಅನ್ನದಾತರ ಬದುಕನ್ನು ಹಸನು ಮಾಡುವ ಉದ್ದೇಶದಿಂದ ಸಾಲ ಮನ್ನಾ ಮಾಡಿದ್ದೇನೆ. ಹಾಗೂ ರಾಜ್ಯದ ಭವಿಷ್ಯದ ಹಿತದೃಷ್ಟಿಯಿಂದ ಜನಪರ ಯೋಜನೆಗಳನ್ನು ರೂಪಿಸುವ ಸಲುವಾಗಿ ಸರಕಾರದ ಆರ್ಥಿಕತೆ ಭದ್ರಪಡಿಸಿಕೊಳ್ಳುವುದು ಅಗತ್ಯವಾಗಿದೆ. ಹೀಗಾಗಿ ಅಲ್ಪಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದೇನೆ. ಅದನ್ನು ತಪ್ಪಾಗಿ ಬಿಂಬಿಸುತ್ತಿರುವ ಮಾಧ್ಯಮದವರು ನೇರವಾಗಿ ನನ್ನನ್ನು ಭೇಟಿ ಮಾಡಿ ಚರ್ಚೆ ನಡೆಸಲಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News