ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ ಆರ್ಭಟ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ಭದ್ರಾ ನದಿಗಳು

Update: 2018-07-14 14:38 GMT

ಚಿಕ್ಕಮಗಳೂರು, ಜು.14: ಜಿಲ್ಲೆಯಲ್ಲಿ ಮಳೆಯ ಅಬ್ಬರ ಬಿರುಸುಗೊಂಡಂತೆ ಮಹಾಮಳೆ ಸೃಷ್ಟಿಸುತ್ತಿರುವ ಅವಾಂತರಗಳೂ ಹೆಚ್ಚುತ್ತಿವೆ. ನಿರಂತರ ಮಳೆಯಿಂದಾಗಿ ಮಲೆನಾಡಿನ ಜೀವನದಿಗಳಾದ ಹೇಮಾವತಿ, ತುಂಗಾ, ಭದ್ರಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ನಿವಾಸಿಗಳು ಮನೆ ತೊರೆಯುವಂತಾಗಿದೆ. ಕೆಲವೆಡೆ ಧರೆ ಕುಸಿದು ಮನೆಗಳಿಗೆ ಹಾನಿಯಾಗಿದ್ದರೆ, ವಿದ್ಯುತ್ ಕಂಬಗಳು ನೆಲಕ್ಕುರುಳಿ ಮಲೆನಾಡಿನ ನೂರಾರು ಗ್ರಾಮಗಳು ಕತ್ತಲೆಕೂಪದಲ್ಲಿ ಮುಳುಗಿವೆ. ಒಟ್ಟಾರೆ ಮಲೆನಾಡಿನ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಶನಿವಾರ ಬೆಳಗ್ಗೆ ಮತ್ತು ಸಂಜೆ ಜೋರಾಗಿತ್ತು. ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಮಳೆ ಸೃಷ್ಟಿಸಿದ ಅವಾಂತರ ಹೆಚ್ಚಿತ್ತು. ತಾಲೂಕಿನ ಕಳಸ ಹೋಬಳಿಯಾದ್ಯಂತ ಹರಿಯುವ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳ ಸೇತುವೆ ಶನಿವಾರ ಬೆಳಗ್ಗೆ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಇದರಿಂದಾಗಿ ಸಂಪರ್ಕ ಕಡಿತದೊಂಡಿದ್ದು, ಹೊರನಾಡಿಗೆ ಬಂದ ಹೊರ ಜಿಲ್ಲೆಗಳ ಪ್ರವಾಸಿಗರು ಸೇತುವೆ ಬಳಿಯೇ ವಾಹನ ಹಿಂದಕ್ಕೆ ತಿರುಗಿಸಿ ಕಳಸ-ಹಳುವಳ್ಳಿಯ ಬದಲಿ ರಸ್ತೆ ಮೂಲಕ ಹೊರನಾಡು ತಲುಪಿದರು. ಇನ್ನು ಈ ರಸ್ತೆಯ ಮಾಹಿತಿ ಇಲ್ಲದವರು ಹಿಂದಕ್ಕೆ ಹೋಗುತ್ತಿದ್ದ ದೃಶ್ಯಗಳೂ ಶನಿವಾರ ಕಂಡು ಬಂದವು. ಹೆಬ್ಬಾಳೆ ಸೇತುವೆ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ 7 ಬಾರಿ ಮುಳುಗಡೆಯಾಗಿದ್ದು, ಸೇತುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಯ ಹಂತಕ್ಕೆ ತಲುಪಿದೆ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲ್ಲೇ ಇರುವ ಕಾರಗದ್ದೆ, ಹೊನ್ನೆಕಾಡು ಗ್ರಾಮಗಳಲ್ಲಿ ಭಾರೀ ಮಳೆಗೆ ಧರೆ ಕುಸಿದು ಎರಡು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಕಾರಗದ್ದೆಯ ರಮೇಶ್ ಎಂಬವರ ನಿರ್ಮಾಣ ಹಂತದ ಮನೆ ಹಿಂಬದಿಯ ಗುಡ್ಡ ಕುಸಿದ ಪರಿಣಾಮ ಮನೆಯ ಗೋಡೆ ಕುಸಿದಿದೆ. ಈ ವೇಳೆ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರು ಮನೆಯ ಹಿಂಬದಿಯಲ್ಲೇ ಇದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಕಾರ್ಮಿಕರು ಪಾರಾಗಿದ್ದಾರೆಂದು ತಿಳಿದು ಬಂದಿದೆ. ಹೋಬಳಿ ವ್ಯಾಪ್ತಿಯ ಹೊನ್ನೇಕಾಡು ಗ್ರಾಮದ ಜಿನರಾಜಯ್ಯ ಎಂಬವರ ಮನೆ ಹಿಂಬದಿಯ ಧರೆ ಕುಸಿದು ಬಿದ್ದಿದ್ದು, ಮನೆಯ ಹಿಂಬದಿ ಗೋಡೆಗೆ ಹಾನಿಯಾಗಿದೆ. ಮಳೆಗೆ ಮತ್ತೆ ಧರೆ ಕುಸಿಯುವ ಭೀತಿ ಕುಟುಂಬದವರನ್ನು ಆವರಿಸಿದೆ. ಅಲ್ಲದೆ ಮನೆ ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮನೆಯ ಸದಸ್ಯರು ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆಂದು ತಿಳಿದು ಬಂದಿದೆ.

ಇನ್ನು ಮೂಡಿಗೆರೆ ತಾಲೂಕಿನ ದುಂಡುಗ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ಗಾಳಿ ಸಹಿತ ಮಳೆಯಾದ ಪರಿಣಾಮ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಒಂದು ನೆಲಕ್ಕುರುಳಿರುವುದೂ ಸೇರಿದಂತೆ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ನಡೆದಿದೆ. ಪರಿಣಾಮವಾಗಿ ತಾಲೂಕಿನ ನೂರಾರು ಗ್ರಾಮಗಳು ವಿದ್ಯುತ್ ಇಲ್ಲದೇ ಕತ್ತಲೆ ಕೂಪದಲ್ಲಿ ಮುಳುಗಿವೆ. ಮೆಸ್ಕಾಂ ಸಿಬ್ಬಂದಿ ನೆಲಕ್ಕುರುಳಿದ ಕಂಬಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸುರಿಯುವ ಮಳೆಯಲ್ಲೇ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ.

ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ, ನೆಮ್ಮಾರು, ಶೃಂಗೇರಿ ಪಟ್ಟಣ ಸುತ್ತಮುತ್ತ ಹಾಗೂ ಕೊಪ್ಪ ತಾಲೂಕಿನ ಜಯಪುರ, ಕೊಪ್ಪ, ಹರಿಹರಪುರ ಮತ್ತಿತರ ಕಡೆಗಳಲ್ಲಿ ಶನಿವಾರ ಮಳೆ ಬಿರುಸಗೊಂಡಿದ್ದರಿಂದ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತುಂಗಾ ನದಿಯಲ್ಲಿ ಭಾರೀ ನೀರು ಹರಿದು ಬಂದ ಪರಿಣಾಮ ಪಟ್ಟಣದ ಗಾಂಧಿ ಮೈದಾನ, ಬೈಪಾಸ್ ರಸ್ತೆ, ಕಟ್ಟೆ ಬಾಗಿಲು ರಸ್ತೆ ಜಲಾವೃತಗೊಂಡಿದ್ದು, ಪ್ರವಾಸಿಗರ ವಾಹನ ಸಂಚಾರ ಮತ್ತು ವಾಹನ ನಿಲುಗಡೆಗೆ ತೊಂದರೆಯಾಗಿದೆ. ಶನಿವಾರ ಮಧ್ಯಾಹ್ನದಿಂದ ಮಳೆ ಬಿರುಸುಗೊಂಡಿರುವುದರಿಂದ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ನದಿ ಪಾತ್ರದ ಮನೆಗಳು ಜಲಾವೃತಗೊಳ್ಳುವ ಭೀತಿ ನಿವಾಸಿಗಳನ್ನು ಕಾಡುತ್ತಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ.

ಮಳೆ ಅವಾಂತರ ಚಿಕ್ಕಮಗಳೂರು ನಗರದಲ್ಲೂ ನಡೆದಿದ್ದು, ನಗರ ಸಮೀಪದ ಕೈಮರ ಎಂಬಲ್ಲಿ ಬೃಹತ್ ಮರವೊಂದ ನೆಲಕ್ಕುರುಳಿದ ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಒಂದು ಜೀಪ್ ಹಾಗೂ ಇನೋವಾ ಕಾರು ಜಖಂಗೊಂಡ ಘಟನೆ ಜರಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಜಿಲ್ಲೆಯ ಕಡೂರು, ತರೀಕೆರೆ ತಾಲೂಕುಗಳಲ್ಲೂ ಮಳೆಯಾಗುತ್ತಿದ್ದು, ಅವಾಂತರ ಸೃಷ್ಟಿಯಾದ ಬಗ್ಗೆ ವರದಿಯಾಗಿಲ್ಲ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆ ಸೃಷ್ಟಿಸುತ್ತಿರುವ ಅವಾಂತರ ಮುಂದುವರಿದಿದ್ದು, ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ನೀಡಿದ ಪರಿಣಾಮ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News