ಪ್ರಧಾನಿ ಮೋದಿಗೆ ನಮ್ಮ ಮೇಲೆ ಕೋಪ: ಮಲ್ಲಿಕಾರ್ಜುನ ಖರ್ಗೆ

Update: 2018-07-14 15:19 GMT

ಕಲಬುರಗಿ, ಜು.14: ಪ್ರಧಾನಿ ನರೇಂದ್ರ ಮೋದಿ ಯಾಕೋ ನಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾರೆ. ನಮ್ಮ ಯಾವ ಕೆಲಸಗಳನ್ನೂ ಅವರು ಮಾಡಿಕೊಡುತ್ತಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಸಮೀಪ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಯಾಕೋ ನಮ್ಮ ಮೇಲೆ ಮುನಿಸಿಕೊಂಡಿರುವಂತಿದೆ. ಯುಪಿಎ ಸರಕಾರದ ಅವಧಿಯ ಯೋಜನೆಗಳಿಗೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಬಾಯಿ ಬಿಟ್ಟರೆ ಬುಲೆಟ್ ಟ್ರೈನ್ ಬಗ್ಗೆ ಮಾತನಾಡುತ್ತಾರೆ. ಆದರೆ, ರೈಲ್ವೆ ಡಬ್ಲಿಂಗ್ ಮತ್ತು ವಿದ್ಯುದೀಕರಣದ ಬಗ್ಗೆ ಮಾತ್ರ ಯಾವುದೇ ಮಾತುಗಳನ್ನಾಡುವುದಿಲ್ಲ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಬೇಕಾದರೆ ಬುಲೆಟ್ ಟ್ರೈನ್ ಬದಲು ರೈಲ್ವೆ ಮಾರ್ಗ ಡಬ್ಲಿಂಗ್ ಹಾಗೂ ವಿದ್ಯುದ್ದೀಕರಣದ ಬಗ್ಗೆ ಹೆಚ್ಚಿನ ಗಮನ ನೀಡಲಿ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ನಮ್ಮ ಯಾವ ಯೋಜನೆಗಳಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕಾಮಗಾರಿಗಳಿಗೆ ಅಗತ್ಯವಿರುವಷ್ಟು ಅನುದಾನ ನೀಡುತ್ತಿಲ್ಲ. ಇದರಿಂದಾಗಿ, ಯುಪಿಎ ಸರಕಾರದ ಅವಧಿಯಲ್ಲಿ ಆರಂಭಗೊಂಡ ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ. 2019ರಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ನನೆಗುದಿಗೆ ಬಿದ್ದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ವಿಮಾನ ನಿಲ್ದಾಣದ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ, ಅಕ್ಟೋಬರ್ ಅಂತ್ಯಕ್ಕೆ ಕಾಮಗಾರಿ ಮುಕ್ತಾಯವಾಗುವ ಸಾಧ್ಯತೆಯಿದೆ. ಶೀಘ್ರದಲ್ಲಿಯೇ ಪ್ರಾಯೋಗಿಕವಾಗಿ ವಿಮಾನ ಹಾರಾಟ ನಡೆಸಲಾಗುವುದು ಎಂದು ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳು ಮಲ್ಲಿಕಾರ್ಜುನ ಖರ್ಗೆಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News