ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಹಿಮಾ ದಾಸ್ ಗೆ 10 ಲಕ್ಷ ರೂ. ಬಹುಮಾನ: ಡಿಸಿಎಂ ಪರಮೇಶ್ವರ್

Update: 2018-07-14 15:31 GMT

ಬೆಂಗಳೂರು, ಜು. 14: ಫಿನ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನ ಮಹಿಳೆಯರ 400 ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಅಥ್ಲೀಟ್ ‘ಹಿಮಾ ದಾಸ್’ ಅವರಿಗೆ ಉಪ ಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ 10 ಲಕ್ಷ ರೂ.ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

'ಅಥ್ಲೆಟಿಕ್ ಟ್ರ್ಯಾಕ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದಲ್ಲೇ ಮೊದಲ ಕ್ರೀಡಾ ಪಟು ಹಿಮಾದಾಸ್. ಹಳ್ಳಿ ಹುಡುಗಿಯಾದ ಹಿಮಾದಾಸ್ ಅವರ ಈ ಸಾಧನೆ ಲಕ್ಷಾಂತರ ಯುವ ಕ್ರೀಡಾಪಟಗಳಿಗೆ ಮಾದರಿಯಾಗಿದೆ' ಎಂದು ಪರಮೇಶ್ವರ್ ಶ್ಲಾಘಿಸಿದ್ದಾರೆ.

ಹಿಮಾದಾಸ್ ಅವರಂತೆ ಯುವಕರು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ತೋರಿ, ಮುಂದೆ ಬರಬೇಕು. ನಾನೂ ಅಥ್ಲೀಟ್ ಆಗಿದ್ದವನು. ಕಾಲೇಜು ದಿನಗಳಲ್ಲಿ ಅಂತರ ವಿಶ್ವ ವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಗೆದ್ದಿದ್ದೆ. ನನ್ನ 10.9 ಸೆಕೆಂಡ್‌ನ ಗೆಲುವನ್ನು ಇನ್ನೂ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.
ಅಲ್ಲದೆ, ಸಾಕಷ್ಟು ರಾಷ್ಟ್ರೀಯ ಮಟ್ಟದಲ್ಲಿ ಜಯಗಳಿಸಿದ್ದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತರಬೇತಿಯೂ ಪಡೆದಿದ್ದೆ ಎಂದು ಕ್ರೀಡೆ ಮೇಲಿರುವ ಅವರ ಆಸಕ್ತಿ ಬಿಚ್ಚಿಟ್ಟಿದ್ದಾರೆ. ಇವರು ಪ್ರಸ್ತುತ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷರು ಹಾಗೂ ಆಲ್ ಇಂಡಿಯಾ ಅಥ್ಲೆಟಿಕ್ಸ್ ಫೆಡರೇಷನ್‌ನ ಉಪಾಧ್ಯಕ್ಷರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News