ಅನ್ಯಾಯ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ: ಪತ್ರಕರ್ತ ಪಾಟೀಲ್ ಪುಟ್ಟಪ್ಪ

Update: 2018-07-14 16:23 GMT

ಧಾರವಾಡ, ಜು. 14: ಉತ್ತರ ಕರ್ನಾಟಕಕ್ಕೆ ಇದೇ ರೀತಿ ಅನ್ಯಾಯ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ನೀಡಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ಪಾಟೀಲ್ ಪುಟ್ಟಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗಕ್ಕೆ ಆಗಿರುವ ಅನ್ಯಾಯದ ಕುರಿತು ಬಳ್ಳಾರಿ, ದಾವಣಗೆರೆ, ಕಲಬುರ್ಗಿ ಜಿಲ್ಲೆಗಳಲ್ಲಿ ಸಭೆ ಮಾಡಬೇಕಿದೆ. ಪ್ರತ್ಯೇಕ ಕರ್ನಾಟಕ ರಾಜ್ಯದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಾಳೆ(ಜು.15) ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಅವರಿಗೆ ಈ ಕುರಿತು ವಿವರಣೆ ನೀಡುವೆ ಎಂದ ಅವರು, ಉತ್ತರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಆಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ಆಂಗ್ಲ ವ್ಯಾಮೋಹ ಸಲ್ಲ: ಒಂದನೆ ತರಗತಿಯಿಂದಲೇ ಇಂಗ್ಲಿಷ್ ಕಲಿಕೆ ಬೇಡ. ಆರಂಭದಿಂದಲೇ ಇಂಗ್ಲಿಷ್ ಕಲಿಕೆ ಬೇಕೆಂಬುದನ್ನು ನಾನು ಒಪ್ಪುವುದಿಲ್ಲ. ಅಸ್ಸಾಂ, ಪಂಚಾಬ್, ಕೇರಳ ಸೇರಿ ಹಲವು ರಾಜ್ಯಗಳು ಆಂಗ್ಲ ವ್ಯಾಮೋಹಕ್ಕೆ ಅಂಟಿಕೊಂಡಿವೆ ಎಂದು ಟೀಕಿಸಿದರು.

ಐದನೆ ತರಗತಿಯ ನಂತರ ಬೇಕಾದರೆ ಮಕ್ಕಳಿಗೆ ಇಂಗ್ಲಿಷ್ ಕಲಿಸಲಿ. ಕನ್ನಡ ಶಾಲೆಗಳನ್ನು ಮಕ್ಕಳ ಸಂಖ್ಯೆ ಕೊರತೆ ನೆಪದಲ್ಲಿ ವಿಲೀನ ಮಾಡುವುದನ್ನು ಒಪ್ಪುವುದಿಲ್ಲ. ಕನ್ನಡ ಭಾಷೆ ಉಳಿವಿಗಾಗಿ ಆಂದೋಲನವನ್ನು ಮುಂದುವರಿಸುವೆ ಎಂದು ಪಾಟೀಲ್ ಪುಟ್ಟಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News