×
Ad

ವಿಜಯಾನಂದ ಕಾಶೆಪ್ಪನವರನ್ನು ಪಕ್ಷದಿಂದ ಉಚ್ಛಾಟಿಸಲು ಆಗ್ರಹ

Update: 2018-07-14 23:06 IST

ಬೆಂಗಳೂರು, ಜು.14: ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ವಿರುದ್ಧ ಅನಗತ್ಯವಾಗಿ ಆರೋಪ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಎಸ್.ಕಾಶೆಪ್ಪನವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ವೈ. ಬೆನ್ನೂರ ವಿಧಾನ ಸಭಾ ಚುನಾವಣೆ ಸೋಲಿನ ಹತಾಶೆಯಿಂದಾಗಿ ವಿಜಯಾನಂದ ಕಾಶೆಪ್ಪನವರ ಸರಳ ಸ್ವಭಾವದ ವ್ಯಕ್ತಿ ಎಸ್.ಆರ್.ಪಾಟೀಲ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಶಿಸ್ತು ಕ್ರಮ, ಕೈಗೊಳ್ಳಬೇಕು ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.

ಇದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಕೂಡಲೇ ವಿಜಯಾನಂದ ಕಾಶೆಪ್ಪನವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅದು ಇದೇ ರೀತಿ ಮುಂದುವರೆದರೆ, ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಅಕ್ಕಮಹಾದೇವಿ ಪಾಟೀಲ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಎಸ್.ಆರ್.ಪಾಟೀಲ ಬದಾಮಿಗೆ ಹೆಚ್ಚು ಗಮನ ನೀಡಿದ್ದರು. ಹೀಗಾಗಿ, ಹೇಗೆ ಅವರು ಕಾಶೆಪ್ಪನವರ ಸೋಲಿಗೆ ಕಾರಣರಾಗುತ್ತಾರೆ ಎಂದು ಪ್ರಶ್ನಿಸಿದರು. ಮಾಧ್ಯಮಗಳ ಮುಂದೆ ಬಂದು ವಿಜಯಾನಂದ ಕಾಶೆಪ್ಪನವರು ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News