ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ: ಡಾ.ಜಿ.ಪರಮೇಶ್ವರ್

Update: 2018-07-14 18:06 GMT

ತುಮಕೂರು,ಜು.14: ಒಂದೇ ಉಡಾಯನ ಯಂತ್ರದಲ್ಲಿ 104 ಉಪಗ್ರಹಗಳನ್ನು ಒಂದೇ ಬಾರಿ ಆಕಾಶಕ್ಕೆ ಹಾರಿಸುವ ಮೂಲಕ ಬಾಹ್ಯಕಾಶ ಕ್ಷೇತ್ರದಲ್ಲಿ ಇಡೀ ವಿಶ್ವ ನಿಬ್ಬೆರಗಾಗುವಂತೆ ಮಾಡಿದ ಭಾರತ, ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹಳ ಮುಂಚೂಣಿಯಲ್ಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಹೆಚ್.ಎಂ.ಟಿ. ಕೈಗಡಿಯಾರ ಕಾರ್ಖಾನೆ ಆವರಣದಲ್ಲಿಂದು ಏರ್ಪಡಿಸಿದ್ದ ಹೆಚ್.ಎಂ.ಟಿಗೆ ವಿದಾಯ, ಇಸ್ರೋಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, 158.65 ಕೋಟಿ ರೂ. ಹಣ ನೀಡಿ 109.823 ಎಕರೆ ಜಾಗವನ್ನು ಇಸ್ರೋ ಖರೀದಿಸಿದ್ದು, ಇಲ್ಲಿ ಉಪಗ್ರಹಕ್ಕೆ ಸಂಬಂಧಿಸಿದ ಪರಿಕರಗಳನ್ನು ತಯಾರಿಸುವ ಅತ್ಯಾಧುನಿಕ ತಂತ್ರಜ್ಞಾನದ ಕೈಗಾರಿಕಾ ಕೇಂದ್ರ ಈ ಜಾಗದಲ್ಲಿ ಸ್ಥಾಪನೆಯಾಗಲಿದೆ. ಇದರಿಂದ ತುಮಕೂರು ನಗರ ವಿಶ್ವಭೂಪಟದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಈ ಕೇಂದ್ರ ಸ್ಥಾಪನೆಯಾದ ನಂತರ ಹೆಚ್‍ಎಂಟಿ ಕಾರ್ಖಾನೆಯಲ್ಲಿ ದುಡಿದವರ ಮಕ್ಕಳಿಗೆ ಹೆಚ್ಚು ಉದ್ಯೋಗಾವಕಾಶ ಸಿಗಲಿ, ಜೊತೆಗೆ ಜಿಲ್ಲೆಯ ನಿರುದ್ಯೋಗಿಗಳಿಗೂ ಅದ್ಯತೆ ನೀಡುವಂತೆ ಮನವಿ ಮಾಡಿದರು.

ತುಮಕೂರು ಇಂಡಸ್ಟ್ರೀಯಲ್ ಹಬ್ ಆಗುತ್ತಿದ್ದು 50 ಸಾವಿರ ಕೋಟಿ ಬಂಡವಾಳದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಶ್ವದ ಪ್ರತಿಷ್ಠಿತ ಕಂಪನಿಗಳು ಬಂಡವಾಳ ಹೂಡಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಿದ್ದು ಇಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ 2.50 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಚಿಂತನೆ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಹೆಚ್.ಎ.ಎಲ್.ಲಘು ವಿಮಾನ ತಯಾರಿಕಾ ಘಟಕ, ಪಾಸ್‍ಪೋರ್ಟ್ ಕಛೇರಿ ಆರಂಭಗೊಂಡಿದ್ದು, ಈಗ ಇಸ್ರೋದಂತಹ ಮಹತ್ವ ಸಂಸ್ಥೆ ಬರುವುದಕ್ಕೆ ಸಂಸದ ಮುದ್ದಹನುಮೇಗೌಡರು ಕಾರಣವಾಗಿದ್ದಾರೆ. ಬೆಂಗಳೂರಿನಲ್ಲಿ ಆರಂಭವಾಗಿರುವ ಮೆಟ್ರೋ ರೈಲು ಸಂಚಾರವನ್ನು ತುಮಕೂರು ನಗರದವರೆಗೆ ವಿಸ್ತರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಈ ಸಮಾರಂಭ ದುಃಖ ಮತ್ತು ಸಂತಸದ ಸಮ್ಮಿಲನವಾಗಿದೆ. ಇಸ್ರೋ ಕೇಂದ್ರ ಆದಷ್ಟು ಬೇಗ ಆರಂಭವಾಗಿ ಹೆಚ್‍ಎಂಟಿ ವಿದಾಯದ ನೋವನ್ನು ಮರೆಸುವಂತಾಗಲಿ ಎಂದರು. ಗುಬ್ಬಿ ಬಳಿ ಹೆಚ್‍ಎಎಲ್ ಘಟಕ ಕಾಮಗಾರಿ ನಿಧನವಾಗಿ ಸಾಗುತ್ತಿದ್ದು ಇದು ಚುರುಕುಗೊಳ್ಳಬೇಕಾಗಿದೆ. ಈ ಬಗ್ಗೆ ಸಂಸದರು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ಹೆಚ್‍ಎಎಲ್,ಇಸ್ರೋದಂತಹ ಘಟಕದಲ್ಲಿ ಶ್ರೀಮಂತರು, ಉನ್ನತ ಅಧಿಕಾರಿಗಳ ಮಕ್ಕಳಿಗೆ ಹೆಚ್ಚು ಉದ್ಯೋಗ ಸಿಗುತ್ತಿದ್ದು ಗ್ರಾಮೀಣ ಜನರ ಮಕ್ಕಳಿಗೆ ಇಲ್ಲಿ ಹೆಚ್ಚು ಉದ್ಯೋಗ ಸಿಗುವಂತಾಗಬೇಕು. ಕೈಗಾರಿಕೆಗಳ ಸ್ಥಾಪನೆ ಜೊತೆಗೆ ಜನರಿಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಬೆಳೆಯಲು ಆಧುನಿಕ ಕೃಷಿ ಕ್ಷೇತ್ರದತ್ತ ಚಿಂತನೆ ನಡೆಸಬೇಕಾಗಿದೆ. ಇಲ್ಲವಾದಲ್ಲಿ ಆಹಾರ ಸಮಸ್ಯೆ ಎದುರಾಗಲಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ, ತುಮಕೂರಿನಲ್ಲಿ ಹೆಚ್‍ಎಂಟಿ ಕಾರ್ಖಾನೆ ಸ್ಥಾಪನೆಯಾಗಲು ಅಂದು ಸಂಸದರಾಗಿದ್ದ ದಿ.ಕೆ.ಲಕ್ಕಪ್ಪನವರ ಹೋರಾಟ, ಶ್ರಮ ಸಾಕಷ್ಟಿದೆ. ಇಲ್ಲಿ ಉತ್ಪಾದನೆಯಾದ ಕೈಗಡಿಯಾರಗಳಿಗೆ ವಿಶ್ವಮಾನ್ಯತೆ ಇತ್ತು. ಕಳೆದ 10 ವರ್ಷಗಳಿಂದಚೆಗೆ ಕಾರ್ಖಾನೆ ನಷ್ಟ ಅನುಭವಿಸಿದ್ದರಿಂದ ಕೇಂದ್ರ ಸರ್ಕಾರ ಇದನ್ನು ಮುಚ್ಚಲು ನಿರ್ಧಾರ ಕೈಗೊಳ್ಳಬೇಕಾಯಿತು. ಈ ನೋವನ್ನು ಮರೆಸುವಂತಹ ಇಸ್ರೋ ಕೇಂದ್ರ ಇಲ್ಲಿ ಸ್ಥಾಪನೆಯಾಗುತ್ತಿದ್ದು, ಇದಕ್ಕೆ ಕೇಂದ್ರ ಸರಕಾರ, ಪ್ರಧಾನಿ ನರೇಂದ್ರಮೋದಿ, ಸಂಬಂಧಿಸಿದ ಸಚಿವರು, ರಾಜ್ಯ ಸರಕಾರ ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ತುಮಕೂರು ನಗರ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿದ್ದು, ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುವುದರಿಂದ ಅಭಿವೃದ್ಧಿಗೆ ಆಧ್ಯತೆ ದೊರೆಯಲಿದೆ. ಇದಕ್ಕೆ ಪೂರಕವಾದ ಹೆದ್ದಾರಿಗಳ ಅಭಿವೃದ್ಧಿ, ಅಗಲೀಕರಣ, ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗಳನ್ನು ಚುರುಕುಗೊಳಿಸಬೇಕಾಗಿದೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ,ಫುಡ್‍ಪಾರ್ಕ್, ಹೆಚ್‍ಎಎಲ್, ಇಸ್ರೋ ಇಂತಹ ಕೇಂದ್ರ ಸ್ವಾಮ್ಯದ ಕಾರ್ಖಾನೆಗಳಲ್ಲಿ ನಮ್ಮ ಜಿಲ್ಲೆಯ ಅಭ್ಯರ್ಥಿಗಳಿಗೆ ಕೆಲಸ ಸಿಗಬೇಕಾದರೆ ಅದಕ್ಕೆ ಪೂರಕವಾದ ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರ ಐಟಿಐ, ಪಾಲಿಟೆಕ್ನಿಕ್ ಗಳಿಗೆ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

ಚಿತ್ರದುರ್ಗ ಸಂಸದ ಬಿ.ಎನ್.ಚಂದ್ರಪ್ಪ, ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಇಸ್ರೋದ ಜಂಟಿ ಕಾರ್ಯದರ್ಶಿ ಎಸ್.ಕುಮಾರಸ್ವಾಮಿ ಮಾತನಾಡಿದರು. ದಿ.ಕೆ.ಲಕ್ಕಪ್ಪ ಅವರ ಪುತ್ರ ಕೆ.ಎಲ್.ಪ್ರಕಾಶ್ (ದೇವು) ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಮಾಜಿ ಶಾಸಕ ಡಾ. ಎಸ್.ರಫೀಕ್‍ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಕೆಂಚಮಾರಯ್ಯ, ಇಸ್ರೋ ಹಿರಿಯ ಅಧಿಕಾರಿ ಕುಮಾರಸ್ವಾಮಿ, ಹೆಚ್‍ಎಂಟಿ ಹಿರಿಯ ಅಧಿಕಾರಿ ಪಟ್ನಾಯಕ್, ಎಂ.ವಿ.ರಾಮಚಂದ್ರ ಮುಂತಾದವರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News