ಕುಶಾಲನಗರ: ಎಟಿಎಂ ನಂಬರ್ ಪಡೆದು ಹಣ ಲಪಟಾಯಿಸಿದ ವಂಚಕ

Update: 2018-07-14 18:21 GMT

ಮಡಿಕೇರಿ ಜು.14: ಗ್ರಾಹಕರೊಬ್ಬರ ಎಟಿಎಂ ಪಿನ್ ನಂಬರ್ ಪಡೆದ ವಂಚಕನೊಬ್ಬ 6,900 ರೂ.ಗಳನ್ನು ಎಗರಿಸಿರುವ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ.

ಕೂಡ್ಲೂರು ನವಗ್ರಾಮದ ನಿವಾಸಿ ಎಸ್.ಎನ್.ಪುಟ್ಟಸ್ವಾಮಿ ಎಂಬವರೇ ಹಣ ಕಳೆದುಕೊಂಡವರು. ಇವರು ಕುಶಾಲನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದರು. ಜು. 13ರ ಸಂಜೆ 6-15ರ ಸಮಯದಲ್ಲಿ 7808995895 ನಂಬರ್‍ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ‘ನಿಮ್ಮ ಎಟಿಎಂ ನಾಳೆ ಬ್ಲಾಕ್ ಆಗುತ್ತಿದೆ. ಅದನ್ನು ಆಕ್ಟೀವ್ ಮಾಡಬೇಕು’ ಎಂದು ತಿಳಿಸಿ ಎಟಿಎಂ ಕಾರ್ಡ್ ನಂಬರ್ ಹಾಗೂ ಪಿನ್ ನಂಬರ್ ಪಡೆದು ಕ್ರಮವಾಗಿ  4500, 300, 2000 ಮತ್ತು 100 ರೂ.ಗಳನ್ನು ಕೇವಲ ಮೂರು ನಿಮಿಷದಲ್ಲಿ ಡ್ರಾ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಕೂಡಲೇ ಪುಟ್ಟಸ್ವಾಮಿ ಅವರ ಮೊಬೈಲ್‍ಗೆ ಸಂದೇಶ ಬಂದಿದ್ದು, ಬ್ಯಾಂಕಿಗೆ ಧಾವಿಸಿ ಅಕೌಂಟ್‍ನಲ್ಲಿದ್ದ ಹಣ ಪರಿಶೀಲಿಸಿದಾಗ ಹಣ ಡ್ರಾ ಆಗಿರುವುದು ಕಂಡು ಬಂದಿದೆ.

ಈ ಬಗ್ಗೆ ಕುಶಾಲನಗರದ ಪೊಲೀಸ್ ಠಾಣೆಗೆ ದೂರು ನೀಡಿರುವ ಪುಟ್ಟಸ್ವಾಮಿ, ಬ್ಯಾಂಕ್‍ಗಳಲ್ಲಿ ಹಿಂದಿ ಮಾತನಾಡುವ ಸಿಬ್ಬಂದಿಗಳೇ ಹೆಚ್ಚಿನವರಿದ್ದು ನಮಗೆ ಭಾಷೆ ಸಂವಹನದ ಕೊರತೆ ಇದೆ. ಹಣ ಎಗರಿಸಿದ ದುಷ್ಕರ್ಮಿ ಕೂಡ ಹಿಂದಿಯಲ್ಲೇ ಮಾತನಾಡಿದ್ದು, ಬ್ಯಾಂಕ್ ಸಿಬ್ಬಂದಿಯೇ ಕರೆ ಮಾಡಿರಬಹುದು ಎಂದು ಭಾವಿಸಿ ನಂಬರ್ ಕೊಟ್ಟು ಮೋಸ ಹೋಗಬೇಕಾಯಿತು ಎಂದು ಹೇಳಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಪೊಲೀಸ್ ಮತ್ತು ಬ್ಯಾಂಕ್ ಅಧಿಕಾರಿಗಳು ಇಂತಹ ವಂಚಕರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಬ್ಯಾಂಕುಗಳ ವ್ಯವಹಾರದಲ್ಲಿ ಯಾವ ಯಾವ ರೂಪದಲ್ಲಿ ಮೋಸ ಮಾಡುತ್ತಾರೆ ಎಂಬುದನ್ನು ಅಧಿಕಾರಿಗಳು ಅನೇಕ ಬಾರಿ ಗ್ರಾಹಕರಿಗೆ ತಿಳಿಸಿದರೂ ಅದನ್ನು ಆಗಷ್ಟೇ ಕೇಳಿ ಮರೆತು ಬಿಡುತ್ತಾರೆ ಎಂಬುವುದಕ್ಕೆ ಈ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News