2019ರ ಚುನಾವಣೆಗೆ ಮುನ್ನ ರಾಮಮಂದಿರ ನಿರ್ಮಾಣ ಎಂದು ಅಮಿತ್ ಶಾ ಭರವಸೆ ನೀಡಿಲ್ಲ: ಬಿಜೆಪಿ

Update: 2018-07-15 08:55 GMT

ಹೊಸದಿಲ್ಲಿ, ಜು.15: ಮುಂದಿನ ಸಾರ್ವತ್ರಿಕ ಚುನಾವಣೆಗೆ ಮೊದಲು ರಾಮಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸುವುದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿಲ್ಲ ಎಂದು ಪಕ್ಷ ಹೇಳಿಕೊಂಡಿದೆ. ಈ ಕುರಿತ ಮಾಧ್ಯಮ ವರದಿಗಳು ನಿರಾಧಾರ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.

ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹೇಳಿಕೆ ನೀಡಿರುವ ಬಿಜೆಪಿ, "ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಇಂತಹ ಯಾವ ಹೇಳಿಕೆಯನ್ನೂ ನೀಡಿಲ್ಲ" ಎಂದು ಸ್ಪಷ್ಟಪಡಿಸಿದೆ. ಹೈದರಾಬಾದ್‍ನಲ್ಲಿ ಶುಕ್ರವಾರ ಅಮಿತ್ ಶಾ ನಡೆಸಿದ ಮುಖಂಡರ ಸಭೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಕಾರ್ಯಸೂಚಿಯ ಭಾಗವೂ ಆಗಿರಲಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಆದರೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ.ಶೇಖರ್ ರಾವ್ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಶಾ ಹೇಳಿಕೆ ಹಿನ್ನೆಲೆಯಲ್ಲಿ 'ಇಂಡಿಯಾ ಟುಡೇ' ಶೇಖರ್‍ರಾವ್ ಅವರನ್ನು ಸಂಪರ್ಕಿಸಿದಾಗ, "2019ರ ಲೋಕಸಭೆ ಚುನಾವಣೆಗೆ ಮುನ್ನ ರಾಮಮಂದಿರ ನಿರ್ಮಾಣ ಆರಂಭಿಸುವುದಾಗಿ ಅಮಿತ್ ಶಾ ಹೇಳಿಕೆ ನೀಡಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಪೂರಕ ವಾತಾವರಣವಿದೆ ಎಂದು ಶಾ ಹೇಳಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ಬಿಜೆಪಿ ಶಾಸಕ ಎನ್.ಆರ್.ರಾವ್ ಕೂಡಾ ಎಎನ್‍ಐ ಜತೆಗೆ ಮಾತನಾಡಿ, "ಶಾ ಇಂಥ ಭರವಸೆ ನೀಡಿದ್ದಾರೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News