ರೈತ ಚಳುವಳಿ ಮತ್ತು ಹೋರಾಟದಲ್ಲಿ ತೃಪ್ತಿ ಇದೆ: ದರ್ಶನ್ ಪುಟ್ಟಣ್ಣಯ್ಯ

Update: 2018-07-15 17:07 GMT

ಮೈಸೂರು,ಜು.15: ಇನ್ನು ಮುಂದೆ ರೈತ ಚಳುವಳಿ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ರೈತ ಸಂಘಟನೆಯನ್ನು ಮತ್ತಷ್ಟು ಬಲಿಷ್ಟಗೊಳಿಸುವುದಾಗಿ ಮಾಜಿ ಶಾಸಕ ದಿವಂಗತ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ರೈತ ಸಭೆಯಲ್ಲಿ ಭಾಗವಹಿಸಲು ರವಿವಾರ ಮೈಸೂರಿಗೆಆಗಮಿಸಿದ ಅವರು ಮಾಧ್ಯಮವದರೊಂದಿಗೆ ಮಾತನಾಡಿದರು. ನಾನು ವಿಧಾನಸಭೆ ಚುನಾವಣೆ ಸೋಲಿನ ನಂತರ ವಿದೇಶದಲ್ಲಿದ್ದೆ. ಕಾರಣ ಅಲ್ಲಿ ನನ್ನ ಕಂಪನಿ ವ್ಯವಹಾರ ನೋಡಿಕೊಳ್ಳಬೇಕಿತ್ತು. ಅಲ್ಲಿನ ಕಂಪೆನಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ. ಇನ್ನು ಸ್ವಲ್ಪದಿನಗಳಲ್ಲಿ ಅಲ್ಲಿನ ವ್ಯವಹಾರಗಳನ್ನು ಪೂರ್ಣಗೊಳಿಸಿ ತಂದೆಯವರ ಹಾದಿಯಲ್ಲಿ ರೈತ ಚಳುವಳಿ ಮತ್ತು ಹೋರಾಟಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.

ವಿದೇಶದಲ್ಲಿ ನಾನು ಕೋಟಿ ಗಟ್ಟಲೆ ಹಣ ಸಂಪಾದನೆ ಮಾಡಬಹುದು. ಆದರೆ ಚಳುವಳಿ ಮತ್ತು ಹೋರಾಟದಲ್ಲಿ ಸಿಗುವ ತೃಪ್ತಿ ಅದರಲ್ಲಿ ಇಲ್ಲ. ನನಗೆ ಚಿಕ್ಕಂದಿನಿಂದಲೂ ಹೋರಾಟ ಚಳುವಳಿ ಎಂದರೆ ಆಸಕ್ತಿ. ನಮ್ಮ ರೈತರಿಗೆ ಏನಾದರೂ ಒಳ್ಳೆಯ ಅನುಕೂಲ ಮಾಡಿಕೊಡಬೇಕೆಂಬ ಬಯಕೆ. ಹಾಗಾಗಿ ನನ್ನ ಸಾಫ್ಟ್ ವೇರ್ ವ್ಯವಹಾರವನ್ನು ಬಿಟ್ಟು ಹೋರಾಟಗಳಲ್ಲಿ ಭಾಗವಹಿಸಿ ರೈತರಿಗೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ನನಗೆ ಅಭೂತ ಪೂರ್ವ ಬೆಂಬಲ ನೀಡಿದರೂ ನಾನು ಸೋಲುಕಾಣಬೇಕಾಯ್ತು. ಯಾಕೆ ಸೋತೆ ಎನ್ನುವುದಕ್ಕಿಂತ ಜನರಿಗೆ ಹೇಗೆ ಹತ್ತಿರವಾಗಬೇಕು ಎಂದು ಕೆಲಸಮಾಡುತ್ತೇನೆ. ಕುಮಾರಸ್ವಾಮಿ ಅಲೆಯಿಂದ ನನಗೆ ಸೋಲಾಗಲಿಲ್ಲ. ಕೆಲವು ಅಪಪ್ರಾಚರ ನನ್ನ ಗೆಲುವಿಗೆ ಹಿನ್ನಡೆಯಾಯಿತು ಎಂದು ಹೇಳಿದರು. 

ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ: ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಸ್ವರಾಜ್ ಇಂಡಿಯಾ ಪಕ್ಷ ಮತ್ತು ಚಳುವಳಿಯನ್ನು ತಳಮಟ್ಟದಿಂದ ಕಟ್ಟಲು ಕೆಲಸಮಾಡುತ್ತೇನೆ. ರಾಜಕೀಯಕ್ಕೆ ತಂದೆ ಅಕಾಲಿಕ ಮರಣದಿಂದ ಬಂದೆ. ಮುಂದೆ ಇದನ್ನೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News