ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲ ಕಲ್ಪಿಸಲು ಕನ್ನಡ ಸೇನೆ ಒತ್ತಾಯ
ಚಿಕ್ಕಮಗಳೂರು, ಜು.16: ಜಿಲ್ಲಾಸ್ಪತ್ರೆಯಲ್ಲಿರುವ ಕುಂದು ಕೊರತೆಯನ್ನು ನಿವಾರಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ವಿವಿಧ ಕನ್ನಡ ಪರ ಸಂಘಟನೆಗಳು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯು ಶತಮಾನದಷ್ಟು ಇತಿಹಾಸವನ್ನು ಹೊಂದಿದ್ದು, ವೈದ್ಯರು, ಶುಶ್ರೂಷಕಿಯರು, ತಂತ್ರಜ್ಞರು, ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಇದರ ಪರಿಣಾಮ ಉನ್ನತ ಚಿಕಿತ್ಸೆಗಾಗಿ ಶಿವಮೊಗ್ಗ, ಹಾಸನಕ್ಕೆ ತೆರಳಬೇಕಾದ ಪರಿಸ್ಥಿತಿ ಇದೆ ಎಂದರು.
ಆಸ್ಪತ್ರೆಯಲ್ಲಿ 400 ಹಾಸಿಗೆ ಸೌಲಭ್ಯ ಹೊಂದಿದ್ದರೂ ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯಗಳಿಲ್ಲ, ಶೇ.50ರಷ್ಟು ಹುದ್ದೆಗಳು ಖಾಲಿ ಇದೆ. ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿ ಆರೋಗ್ಯ ಸೇವೆ ಸಿಗುತ್ತಿಲ್ಲ, ಆಸ್ಪತ್ರೆಗೆ ಬೇಕಾಗಿರುವ ಮೂಲಭೂತ ಸೌಲಭ್ಯ ನೀಡಿ ಉತ್ತಮ ಆರೋಗ್ಯ ಸೇವೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯವಿಲ್ಲದೆ ಕೂಲಿ ಕಾರ್ಮಿಕರು, ಸಾಮಾನ್ಯ ಜನತೆಗೆ ಉತ್ತಮ ವೈದ್ಯಕೀಯ ಸೇವೆ ಸಿಗದೆ ತೊಂದರೆಗೆ ಒಳಗಾಗಿದ್ದಾರೆ. ಇದುವರೆಗೂ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಸರ್ಕಾರ ಜಿಲ್ಲಾಸ್ಪತ್ರೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ನೀಡಿ ಜನತೆಗೆ ಉತ್ತಮ ವೈದ್ಯಕೀಯ ಸೇವೆ ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಹೋರಾಟ ಮಾಡಲಾಗುವುದು ಎಂದರು.
ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಸಂಖ್ಯೆಯಲ್ಲಿದ್ದಾರೆ. ಎಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆಸ್ಪತ್ರೆಯಲ್ಲಿ ಅಗತ್ಯಕ್ಕೆ ತಕ್ಕ ಸಿಬ್ಬಂದಿ ಮೂಲಭೂತ ಸೌಲಭ್ಯಗಳಿಲ್ಲದೆ. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿಲ್ಲ ಇಂದು ಜಿಲ್ಲಾಡಳಿತ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು. ಸರ್ಕಾರ ಸ್ಪಂಧಿಸಿ ಜಿಲ್ಲಾಸ್ಪತ್ರೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ನೀಡುವ ಭರವಸೆ ಇದೆ. ಸರ್ಕಾರ ಸ್ಫಂದಿಸದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಜನಧನಿ ಸಂಘಟನೆಯ ಬಿ. ಅಮ್ಜದ್, ಜನದನಿ ಸಂಘಟನೆ ಸಂಚಾಲಕ ಗುರುಶಾಂತಪ್ಪ, ಮರ್ಲೆ ಅಣ್ಣಯ್ಯ, ಸಿ.ಆರ್. ರಘು ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಸ್ಪತ್ರೆಯಲ್ಲಿರುವ ಕೊರತೆಗಳು:
ಮೂಳೆ ತಜ್ಞರ ಕೊರತೆ, ಇ.ಎನ್.ಟಿ ವೈದ್ಯರ ಕೊರತೆ, ಜನರಲ್ ಸರ್ಜನ್ ಕೊರತೆ, ದಂತ ವೈದ್ಯರ ಕೊರತೆ, ಮಕ್ಕಳ ವೈದ್ಯರ ಕೊರತೆ, ವಾರ್ಡ್ ಬಾಯ್ಸ್ ಕೊರತೆ, ವೈದ್ಯಕೀಯ ಸಿಬ್ಬಂದಿ ಕೊರತೆ, ಎಕ್ಸ್ ರೇ ತಜ್ಞರ ಕೊರತೆ, ಇಸಿಜಿ ತಂತ್ರಜ್ಞರ ಕೊರತೆ, ಓ.ಟಿ. ಟೆಕ್ನೀಷಿಯನ್ ಕೊರತೆ, ವೆಂಟಿಲೇಟರ್ ಕೊರತೆ, ಫಾರ್ಮಸಿಸ್, ಬ್ಯಾಬ್ ತಜ್ಷರು ಕೊರತೆ ಎದುರಿಸುತ್ತಿದೆ ಎಂದು ಕನ್ನಡ ಸೇನೆ ಮುಖಂಡರು ಆರೋಪಿಸಿದ್ದಾರೆ.
ಮೂಲಭೂತ ಸೌಲಭ್ಯಗಳ ಕೊರತೆ: ಎರಡು ಇಕೋ ಕಾರ್ಡಿಯೋಗ್ರಾಫ್ ಮಿಷನ್, ಐದು ಇಸಿಜಿ ಮಿಷನ್, ಮೂರು ಅಂಬ್ಯುಲೆನ್ಸ್ ಹಾಗೂ ಸಿಬ್ಬಂದಿ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, 50 ಮಂಚ, 25 ಗಾಲಿಕುರ್ಚಿ, 50 ಟ್ರಾಲಿ, ಕಟ್ಟಡ ವಿಸ್ತರಣೆ, ಸೋಲಾರ್ ಹಾಗೂ ಸಿಸಿ ಕ್ಯಾಮರಾ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕೆಂದು ಸೇನೆಯ ಮುಖಂಡರು ವೈದ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.