ಶಿವಮೊಗ್ಗ: ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲೆತ್ನಿಸಿದ ರೌಡಿ ಶೀಟರ್ ಗೆ ಗುಂಡೇಟು

Update: 2018-07-16 14:26 GMT

ಶಿವಮೊಗ್ಗ, ಜು.16: ಕಲ್ಲುಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲೆತ್ನಿಸಿದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡಿಕ್ಕಿದ ಘಟನೆ ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಬಳಿ ನಡೆದಿದೆ. 

ರೌಡಿ ಶೀಟರ್ ಸೋನಟ ಆಸೀಫ್ (29) ಗುಂಡಿನ ದಾಳಿಗೆ ಒಳಗಾದ ಆರೋಪಿಯಾಗಿದ್ದಾನೆ. ಆರೋಪಿಯ ಕಲ್ಲೇಟಿನ ದಾಳಿಯಿಂದ ಸಬ್ ಇನ್ಸ್‍ಪೆಕ್ಟರ್ ಗಿರೀಶ್, ಸಿಬ್ಬಂದಿ ಮರ್ದನ್‍ರವರು ಕೂಡ ಗಾಯಗೊಂಡಿದ್ದಾರೆ. ಈ ಮೂವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. 

ಘಟನೆ ಹಿನ್ನೆಲೆ: ಇತ್ತೀಚೆಗೆ ಶಿವಮೊಗ್ಗ ನಗರದ ಉದ್ಯಮಿ, ಜೆಡಿಎಸ್ ಮುಖಂಡ ಹೆವನ್ ಹಬೀಬ್‍ರವರ ಅಳಿಯ ಗ್ರಾನೈಟ್ ಉದ್ಯಮಿ ಸಮೀವುಲ್ಲಾರನ್ನು ಟಿಪ್ಪು ನಗರದ ರೌಡಿ ಬಚ್ಚಾ ನೇತೃತ್ವದ ತಂಡವು ರಿವಾಲ್ವಾರ್ ತೋರಿಸಿ ಅಪಹರಿಸಿತ್ತು. ಏಳು ಲಕ್ಷ ರೂ. ಒತ್ತೆ ಹಣ ಪಡೆದು ಬಿಡುಗಡೆ ಮಾಡಿ ಪರಾರಿಯಾಗಿತ್ತು. ಈ ಕೃತ್ಯದಲ್ಲಿ ಆಸೀಫ್ ಕೂಡ ಭಾಗಿಯಾಗಿದ್ದ ಎನ್ನಲಾಗಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಇತ್ತೀಚೆಗೆ ಬಚ್ಚಾ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆಸಿಫ್ ಸೇರಿದಂತೆ ಕೆಲವರು ತಲೆಮರೆಸಿಕೊಂಡಿದ್ದರು. ಬೆಂಗಳೂರಿನಲ್ಲಿ ವಿಶೇಷ ಪೊಲೀಸ್ ತಂಡ ಆಸಿಫ್‍ನನ್ನು ವಶಕ್ಕೆ ಪಡೆದುಕೊಂಡಿತ್ತು. ಈತ ನೀಡಿದ ಮಾಹಿತಿ ಆಧಾರದ ಮೇಲೆ ಮತ್ತೋರ್ವ ಆರೋಪಿ ಆಯಾಜ್ ಎಂಬಾತನ ಬಂಧನಕ್ಕೆ ಸಬ್ ಇನ್ಸ್‍ಪೆಕ್ಟರ್ ಗಿರೀಶ್ ನೇತೃತ್ವದ ತಂಡವು, ದಾವಣಗೆರೆಗೆ ಆಗಮಿಸಿತ್ತು. ಆದರೆ ಆರೋಪಿಯ ಸುಳಿವು ಲಭ್ಯವಾಗಿರಲಿಲ್ಲ. ಈ ಕಾರಣದಿಂದ ಪೊಲೀಸರು ರೌಡಿ ಆಸೀಫ್‍ನೊಂದಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿತ್ತು. ಹೊಳಲೂರು ಬಳಿ ಆರೋಪಿಯು ಮೂತ್ರ ವಿಸರ್ಜನೆಗೆಂದು ಕೆಳಗಿಳಿದಿದ್ದು, ನಂತರ ಪೊಲೀಸರ ಮೇಲೆ ಕಲ್ಲುಗಳನ್ನು ತೂರಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಬ್ ಇನ್ಸ್‍ಪೆಕ್ಟರ್ ಗಿರೀಶ್‍ರವರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದಾಗ್ಯೂ ಆರೋಪಿ ಕಲ್ಲಿನ ದಾಳಿ ಮುಂದುವರಿಸಿದ್ದರಿಂದ, ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಪೊಲೀಸರಿಗೆ ಶೂಟ್ ಮಾಡುವ ಬೆದರಿಕೆ ಹಾಕಿದ್ದರು
ಉದ್ಯಮಿ ಹೆವನ್ ಹಬೀಬ್ ಅಳಿಯ ಸಮೀವುಲ್ಲಾ ಆರೋಪಿಗಳು ಅಪಹರಣ ಮಾಡಿದ್ದ ಸಂದರ್ಭ ಸಹಾಯಕ ಸಬ್ ಇನ್ಸ್‍ಪೆಕ್ಟರ್ ನೇತೃತ್ವದ ಪೊಲೀಸ್ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿ, ಅವರಿದ್ದ ಕಾರನ್ನು ತಡೆಹಿಡಿಯಲು ಯತ್ನಿಸಿತ್ತು. ಈ ವೇಳೆ ಆರೋಪಿಗಳು ಪೊಲೀಸರಿಗೆ ರಿವಾಲ್ವಾರ್ ಮೂಲಕ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದರು. ತದನಂತರ ಏಳು ಲಕ್ಷ ರೂ. ಒತ್ತೆ ಹಣ ಪಡೆದುಕೊಂಡು ಹಬೀಬ್‍ರವರ ಅಳಿಯನನ್ನು ಬಿಡುಗಡೆ ಮಾಡಿದ್ದರು. 

ಪೊಲೀಸರ ವಿರುದ್ದ ವ್ಯಕ್ತವಾಗುತ್ತಿತ್ತು ಅಸಮಾಧಾನ
ಇತ್ತೀಚೆಗೆ ನಗರದ ಪಾತಕಿಗಳ ಕೈಯಲ್ಲಿ ರಿವಾಲ್ವಾರ್ ಕಾಣಿಸಿಕೊಂಡಿದ್ದು ಹಾಗೂ ರಿವಾಲ್ವಾರ್ ತೋರಿಸಿ ಬೆದರಿಸುತ್ತಿದ್ದ ಘಟನೆಗಳು ನಾಗರಿಕರಲ್ಲಿ ಆತಂಕ ಉಂಟು ಮಾಡಿತ್ತು. ಜೊತೆಗೆ ನಗರದಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದ್ದ ರೌಡಿಸಂ ಚಟುವಟಿಕೆ ಮತ್ತೆ ಬೆಳೆಯಲಾರಂಭಿಸಿತ್ತು. ಕ್ರಿಮಿನಲ್ಸ್ ಗಳಿಗೆ ಪೊಲೀಸರ ಬಗ್ಗೆ ಭಯವೇ ಇಲ್ಲದಂತಹ ಸ್ಥಿತಿಯಿತ್ತು. ಕೆಲ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆಯೂ ಸಾಕಷ್ಟು ದೂರುಗಳು ಕೇಳಿಬರಲಾರಂಭಿಸಿದ್ದವು. ಕ್ರಿಮಿನಲ್ಸ್ ಗಳನ್ನು ಹದ್ದುಬಸ್ತಿನಲ್ಲಿಡುವಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗದಿರುವುದಕ್ಕೆ ನಾಗರಿಕ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಲಾರಂಭಿಸಿತ್ತು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News