ಸಚಿವರಾದ ಎಚ್.ಡಿ.ರೇವಣ್ಣ - ಕೃಷ್ಣಭೈರೇಗೌಡ ನಡುವೆ ಜಟಾಪಟಿ ?
ಬೆಂಗಳೂರು, ಜು.16: ಜಲಸಂಪನ್ಮೂಲ ಇಲಾಖೆಯ ಕಡತಗಳ ವಿಲೇವಾರಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆಪಾದನೆ ಎದುರಿಸಿದ್ದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಮುಖ ಯೋಜನೆಯೊಂದರ ಕಡತವನ್ನು ವಿಲೇವಾರಿ ಮಾಡುವಂತೆ ಕೃಷ್ಣಭೈರೇಗೌಡಗೆ ರೇವಣ್ಣ ತಾಕೀತು ಮಾಡಿದ್ದಾರೆ. ಆದರೆ, ಆ ಕಡತವನ್ನು ಏಕಾಏಕಿ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ, ಸಂಪುಟ ಸಭೆಯ ಮುಂದೆ ತಂದು ತೀರ್ಮಾನ ಕೈಗೊಳ್ಳುವುದಾಗಿ ಕೃಷ್ಣಭೈರೇಗೌಡ ಉತ್ತರಿಸಿದ್ದಾರೆ ಎಂದು ಹೇಳಲಾಗಿದೆ.
ತಮಗೆ ಸಂಬಂಧವಿಲ್ಲದ ಖಾತೆಗಳಲ್ಲಿ ರೇವಣ್ಣ ಈ ರೀತಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಕೃಷ್ಣಭೈರೇಗೌಡ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.