ಪೊಲೀಸ್ ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಶಾಸಕ ಕಾರಜೋಳ ಪುತ್ರ: ಆರೋಪ
ಬಾಗಲಕೋಟೆ, ಜು. 16: ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಪೊಲೀಸ್ ಪೇದೆಗೆ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಅರುಣ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಘಟನೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.
ಸೋಮವಾರ ಮುಧೋಳ ನಗರದಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದ ಅರುಣ್ ಕಾರಜೋಳಗೆ ಕಾರು ನಿಲ್ಲಿಸುವಂತಿಲ್ಲ ಎಂದು ಸಂಚಾರಿ ಪೊಲೀಸ್ ಪೇದೆ ಮಲ್ಲೇಶ್ ಲಮಾಣಿ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ಶಾಸಕರ ಪುತ್ರ, ಪೇದೆಗೆ ಮನಸೋ ಇಚ್ಛೆ ಬೈದಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸ್, ಅರುಣ್ ಕಾರಜೋಳ ಬೆಂಬಲಿಗರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಅರುಣ್ ಪೇದೆಗೆ ಕರೆ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕರ್ತವ್ಯ ನಿರತ ಪೇದೆಗೆ ಅಡ್ಡಿ ಪಡಿಸಿ, ಅಶ್ಲೀಲ ಪದ ಬಳಕೆ ಮಾಡಿದ ಕಾರಣ ಸದ್ಯ ಸಂಚಾರಿ ಪೊಲೀಸರು ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಸಂಚಾರಿ ಪೇದೆ ಮಲ್ಲೇಶ್ ಲಮಾಣಿ ನೀಡಿದ ದೂರಿನ ಅನ್ವಯ ಅರುಣ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.