ರೈತರ ಕಣ್ಣೀರು ಒರೆಸಬೇಕಾದವರೇ ಕಣ್ಣೀರು ಹಾಕುತ್ತಿರುವುದು ಬೇಸರದ ಸಂಗತಿ: ಮಾಜಿ ಸಚಿವ ಎ.ಮಂಜು
ಮೈಸೂರು,ಜು.17: ರಾಜ್ಯದ ರೈತರು ಮತ್ತು ಜನರ ಕಣ್ಣೀರು ಒರೆಸಬೇಕಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾವೇ ಕಣ್ಣೀರು ಹಾಕುತ್ತಿರುವುದು ಬೇಸರದ ಸಂಗತಿ ಎಂದು ಮಾಜಿ ಸಚಿವ ಎ.ಮಂಜು ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕಿರುವ ಕುರಿತು ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಹೇಳಿರುವಂತೆ ಕಾಂಗ್ರೆಸ್ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದು, 5 ವರ್ಷದ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದೇಯೆ ವಿನಃ ವಿಷ ಕೊಟ್ಟಿಲ್ಲ, ಅವರು ಕೇಳಿರುವ ಪ್ರಮುಖ ಖಾತೆಗಳನ್ನೇ ಕೊಟ್ಟು ಸ್ವತಂತ್ರವಾಗಿ ಆಡಳಿತ ನಡೆಸಲು ಬಿಟ್ಟಿದ್ದೇವೆ ಎಂದರು.
ಕಾಂಗ್ರೆಸ್ ನಾಯಕರು, ಶಾಸಕರು ತಪ್ಪು ಮಾಡಿರುವ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿರುವುದು ಸರಿಯಲ್ಲ, ಅವರ ಇತ್ತೀಚಿನ ಹೇಳಿಕೆಗಳಿಂದಾಗಿ ಓರ್ವ ಕಾಂಗ್ರೆಸ್ಸಿಗನಾಗಿ ನನಗೆ ನೋವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಆಡಳಿತ ನಡೆಸಬೇಕು. ಸಮ್ಮಿಶ್ರ ಸರ್ಕಾರ ಎಂಬುದು ಸಂಸಾರವಿದ್ದಂತೆ, ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದೇ ಸಿ.ಎಂ.ಕುಮಾರಸ್ವಾಮಿ ಕಣ್ಣೀರು ಹಾಕುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ರೀತಿಯಲ್ಲಿ ಪದೇ ಪದೇ ಸಾರ್ವಜನಿಕ ಸಭೆಗಳಲ್ಲಿ ಕಣ್ಣೀರು ಹಾಕುತ್ತಿರುವ ಸಿಎಂ ಕುಮಾರಸ್ವಾಮಿಯವರ ವರ್ತನೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಮುಜುಗರವಾಗುತ್ತಿದೆ ಎಂದು ಹೇಳಿದರು.
ಸರ್ಕಾರಕ್ಕೆ ಪತ್ರ ಬರೆಯುವುದು ಅಪರಾಧವಲ್ಲ. ತಿಳಿದವರು ಸಲಹೆ ಸೂಚನೆಗಳನ್ನು ನೀಡುವುದರಿಂದ ಅದನ್ನು ಗೌರವಯುತವಾಗಿ ಸ್ವೀಕರಿಸಬೇಕು, ಆದರೆ ಮಾಜಿ ಸಿಎಂ ಸಿದ್ದರಾಮಯ್ಯನವರು ಪತ್ರ ಬರೆದಿದ್ದೇ ಅಪರಾಧವೆಂಬಂತೆ ಕುಮಾರಸ್ವಾಮಿ ಜನರ ಮುಂದೆ ಬಿಂಬಿಸಲು ಹೊರಟಿರುವುದು ಸರಿಯಲ್ಲ. ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದನ್ನು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.
25 ವರ್ಷಗಳ ಕಾಲ ವೀರಶೈವ ಸಮುದಾಯದವರು ಮುಖ್ಯಮಂತ್ರಿ ಆಗಿದ್ದರು. ಅವರ ಅವಧಿಯಲ್ಲಿ ಆಗಿರುವ ಕಾರ್ಯಗಳ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ದೇವೇಗೌಡ ಕೇಳುತ್ತಿರುವುದು ಎಷ್ಟು ಸಮಂಜಸ? ಆಡಳಿತ ನಡೆಸುವವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯೇ ವಿನಃ ಒಂದು ಜಾತಿ, ಜನಾಂಗಕ್ಕೆ ಸಿಮೀತವಲ್ಲ ಎನ್ನುವುದು ಮಾಜಿ ಪ್ರಧಾನಿಯಾಗಿದ್ದವರಿಗೆ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದರು.