ಸಮಾಜಕ್ಕಾಗಿ ಕೊಡುಗೆ ನೀಡುವ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಪರಿಷತ್ ಸದಸ್ಯ ಮರಿತಿಬ್ಬೇಗೌಡ
ಮೈಸೂರು,ಜು.17: ಸಮಾಜಕ್ಕಾಗಿ ಕೊಡುಗೆ ನೀಡುವ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.
ರಾಮಕೃಷ್ಣನಗರ ಕೆ.ಬ್ಲಾಕ್‍ನಲ್ಲಿ ಸೋಮವಾರ ಕುಂಟಲಿ ಸೇವಾ ಟ್ರಸ್ಟ್ ನ ವೃದ್ಧಾಶ್ರಮದ ಹತ್ತನೇ ವರ್ಷದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ವೃದ್ಧಾಶ್ರಮ ನಡೆಸುವುದು ಸುಲಭದ ಮಾತಲ್ಲ. ಯಾರ ಸಹಾಯ, ಸಹಕಾರವೂ ಇಲ್ಲದೇ ವೃದ್ಧಾಶ್ರಮ ನಡೆಸಲು ಸಾಧ್ಯವಿಲ್ಲ. ಸ್ಥಿತಿವಂತರಾದರೂ ಮನೆಯಲ್ಲಿರುವ ವೃದ್ಧ ತಂದೆ-ತಾಯಿಗಳನ್ನು ನೋಡಿಕೊಳ್ಳಲು ಆಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕುಂಡಲಿ ಸೇವಾ ಟ್ರಸ್ಟ್ ತಮ್ಮ ಸೇವೆಯನ್ನು ನೀಡುತ್ತಿದೆ. ಮಹಿಳೆಯರೇ ಸದಸ್ಯರಾಗಿದ್ದುಕೊಂಡು ಸೇವೆ ಸಲ್ಲಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಮೂಲಭೂತ ಸೌಲಭ್ಯ ಒದಗಿಸಿ ನೆಮ್ಮದಿಯ ಜೀವನ ಕೊಡುವುದು ಕಷ್ಟದ ಕೆಲಸ. ಅದರಲ್ಲೂ ಯಾವುದೇ ನೆರವಿಲ್ಲದೆ ಉತ್ತಮವಾಗಿ ನಡೆಸುವುದು ಶ್ರಮದ ಕೆಲಸ. ನೆರವು ಪಡೆದು ಉತ್ತಮ ವೃದ್ಧಾಶ್ರಮ ಕಟ್ಟಲು ಮುಂದಾಗಲಿ. ನಾವೂ ಕೂಡ ಮುಂದಿನ ದಿನಗಳಲ್ಲಿ ನೆರವು ನೀಡಲು ಮುಂದಾಗುತ್ತೇವೆ. ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಮುಖ್ಯಸ್ಥರಾದ ಸೋಮೇಶ್ವರನಾಥ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಈ ಸಂದರ್ಭ ಕೆ.ವಿ.ಮಲ್ಲೇಶ್, ಸುಮಿತ್ರಾ ರಮೇಶ್, ಲಯನ್ ವೆಂಕಟೇಶ್, ವೆಂಕಟೇಶ್ ಕಶ್ಯಪ್ ಮತ್ತಿತರರು ಉಪಸ್ಥಿತರಿದ್ದರು.