ದಾವಣಗೆರೆ: ಸಂಸದರು-ಶಾಸಕರ ನೇತೃತ್ವದಲ್ಲಿ ಸಭೆ; ರೈಲ್ವೆ ಮೇಲ್ಸೆತುವೆಗೆ ಅಂತಿಮ ನಕ್ಷೆ ನೀಡಲು 15 ದಿನ ಗಡುವು
ದಾವಣಗೆರೆ,ಜು.16: ಅಶೋಕ ಚಿತ್ರಮಂದಿರದ ರಸ್ತೆ ಬಳಿಯಲ್ಲಿರುವ ರೈಲ್ವೆ ಕ್ರಾಸಿಂಗ್‍ನಲ್ಲಿ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ಪ್ರಸ್ತುತ ನೀಡಿರುವ ನಕ್ಷೆಗೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿ, ಭೂಸ್ವಾಧೀನ ಮತ್ತು ನಿರ್ಮಾಣದ ಅಂದಾಜು ವೆಚ್ಚ ಸೇರಿದಂತೆ ಸಂಪೂರ್ಣವಾದ ವರದಿಯೊಂದಿಗೆ ನಕ್ಷೆಯನ್ನು ಇನ್ನು 15 ದಿನಗಳ ಒಳಗಾಗಿ ತಯಾರಿಸಿ ನೀಡುವಂತೆ ಸಂಸದ ಜಿ.ಎಂ ಸಿದ್ದೇಶ್ವರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ 2014-15 ರಿಂದ ನೆನೆಗುದಿಗೆ ಬಿದ್ದಿರುವ ಅಶೋಕ ಟಾಕೀಸ್ ಬಳಿಯ ರೇಲ್ವೇ ಮೇಲ್ಸುತುವೆ ಕಾಮಗಾರಿ ಹಾಗೂ ನಗರಮಟ್ಟದ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಚರ್ಚಿಸಲು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚರ್ಚೆಯಲ್ಲಿ ಪಿಡಬ್ಲ್ಯುಡಿ, ಮಹಾನಗರಪಾಲಿಕೆ ಹಾಗೂ ರೈಲ್ವೇ ಇಲಾಖೆಯವರು ಸರ್ವೇ ಮಾಡಿ ತಯಾರಿಸಿದ್ದ ನಕ್ಷೆಗಳ ಸಾಧಕ-ಬಾಧಕಗಳ ಕುರಿತು ಕೂಲಂಕಷವಾಗಿ ಚರ್ಚಿಸಿದ ಬಳಿಕ ರೈಲ್ವೇ ಇಲಾಖೆ ಸಿದ್ದಪಡಿಸಿದ್ದ ಗಾಂಧಿ ಸರ್ಕಲ್‍ನಿಂದ ಅಶೋಕ ಟಾಕಿಸ್ ಮಾರ್ಗವಾಗಿ ಕೆಆರ್ ರಸ್ತೆವರೆಗೆ ರೇಲ್ವೇ ಮೇಲ್ಸೆತುವೆ ನಿರ್ಮಿಸುವ ನಕ್ಷೆಯನ್ನು ಕೆಲವೊಂದು ಮಾರ್ಪಾಡುಗಳೊಂದಿಗೆ ಅನುಷ್ಟಾನಗೊಳಿಸಲು ಸಭೆ ನಿರ್ಧರಿಸಿ, ಇನ್ನು 15 ದಿನಗಳ ಒಳಗೆ ಕೆಲವು ಮಾರ್ಪಾಡುಗಳೊಂದಿಗೆ ಭೂಸ್ವಾಧೀನ ಮತ್ತು ನಿರ್ಮಾಣ ವೆಚ್ಚದ ಅಂದಾಜು ಪಟ್ಟಿಯೊಂದಿಗೆ ನಕ್ಷೆಯನ್ನು ನೀಡಲು ಸೂಚಿಸಲಾಯಿತು.
ಪ್ರಸ್ತುತ ಮಂಜೂರಾಗಿರುವ ರೂ. 35 ಕೋಟಿಗೂ ಅಧಿಕ ಅನುದಾನ ಬೇಕಾಗಬಬಹುದೆಂದು ಅಂದಾಜಿಸಲಾಯಿತು. ಮಾಯಕೊಂಡದ ಗ್ರಾಮಸ್ಥರಾದ ಎಂ.ಎಸ್.ಸಿ ಶಾಸ್ತ್ರಿ ಸೇರಿದಂತೆ ಹಲವು ಗ್ರಾಮಸ್ಥರು, ಸ್ಥಳೀಯರು ಸಭೆಗೆ ಹಾಜರಾಗಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕುರಿತು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ನಗರದ ರೈಲ್ವೇ ಸ್ಟೇಷನ್ ಸುಮಾರು 80 ವರ್ಷಕ್ಕೂ ಹಳೆಯದಾಗಿದ್ದು ಹೊಸ ರೈಲ್ವೇ ಸ್ಟೇಷನ್ ಕಟ್ಟಿಸುವ ಕುರಿತು ಕಳೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದರು ಪ್ರಶ್ನಿಸಿದರು. ಸಹಾಯಕ ವಿಭಾಗೀಯ ಅಭಿಯಂತರರು ಮಾತನಾಡಿ, ಹೊಸ ರೈಲ್ವೇ ಸ್ಟೇಷನ್ ನಿರ್ಮಿಸಲು ಅಂದಾಜು ರೂ.11 ಕೋಟಿ ಅನುದಾನಕ್ಕಾಗಿ ಉನ್ನತ ಅಧಿಕಾರಿಗಳ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನಗರದ ಡಿಸಿಎಂ ಟೌನ್‍ಷಿಪ್ ಬಳಿಯ ಎಲ್ ಸಿ 197 ರ ಆರ್‍ಯುಬಿ ಕೆಲಸ ಜನರಲ್ ಅಲೈನ್‍ಮೆಂಟ್ ಲೈನ್ ಪ್ರಕಾರ ಆಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ 61 ಮೀಟರ್ ಜಾಗ ಬಿಟ್ಟು ಮಾಡಬೇಕೆಂದು ಸೂಚಿಸಿದರು. ಹಾಗೂ ಮಾಯಕೊಂಡ ಕಬ್ಬೂರು ರಸ್ತೆಯಲ್ಲಿ ಡಬ್ಲಿಂಗ್ ಕಾಮಗಾರಿಯಿಂದ ಸಾರ್ವಜನಿಕರು ಓಡಾಡುವ ರಸ್ತೆ ಸಂಪೂರ್ಣ ಹಾಳಾಗಿದೆ. ಪೂರಕ ರಸ್ತೆ ಮಾಡಬೇಕೆಂದರು.
ಶಾಸಕರಾದ ಎಸ್ ಎ ರವೀಂದ್ರನಾಥ, ಕೆ.ಕರುಣಾಕರ ರೆಡ್ಡಿ, ಎಸ್ ವಿ ರಾಮಚಂದ್ರ, ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಇತರರು ಇದ್ದರು.