×
Ad

ತುಮಕೂರು: 7 ವರ್ಷದೊಳಗಿನ ಮಕ್ಕಳ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ಗೆ ಚಾಲನೆ

Update: 2018-07-16 22:53 IST

ತುಮಕೂರು.ಜು.16: ಮಂಡ್ಯ ಚೆಸ್ ಅಕಾಡೆಮಿ ಮತ್ತು ತುಮಕೂರಿನ ಕ್ಯಾಸಲ್ ಸ್ಕೂಲ್ ಆಫ್ ಚೆಸ್, ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಹಾಗೂ ಅಖಿಲ ಭಾರತ ಚೆಸ್ ಸಂಸ್ಥೆ ಸಹಯೋಗದಲ್ಲಿ ಇಂದಿನಿಂದ ಜುಲೈ 24 ರವರೆಗೆ ನಡೆಯಲಿರುವ 32ನೇ ರಾಷ್ಟ್ರೀಯ ಏಳು ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಚೆಸ್ ಪಂದ್ಯಾವಳಿಗೆ ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಚಾಲನೆ ನೀಡಿದರು.

ನಗರದ ಬಂಡಿಮನೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು 368 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದು, ಇಂದಿನಿಂದ ರೌಂಡ್ ಲೀಗ್‍ನಲ್ಲಿ ಪಂದ್ಯಾವಳಿಗಳು ನಡೆಯಲಿವೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಜ್ಯೋತಿಗಣೇಶ್, ಕಳೆದ 31 ವರ್ಷಗಳ ಹಿಂದೆ ವಿಶ್ವ ಚೆಸ್ ಮಾಸ್ಟರ್ ಆಗಿರುವ ವಿಶ್ವನಾಥ್ ಆನಂದ ಇಲ್ಲಿ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಇಷ್ಟು ದೊಡ್ಡ ಮಟ್ಟದಲ್ಲಿ ಚೆಸ್ ಪಂದ್ಯಾವಳಿ ನಡೆಯುತ್ತಿರುವುದು ಸ್ವಾಗತಾರ್ಹ. ಇಲ್ಲಿ ಆಡುತ್ತಿರುವ ಎಷ್ಟೋ ಮಕ್ಕಳು ವಿಶ್ವನಾಥ್ ಆನಂದ್ ರೀತಿ, ಇಂದಿನ ಲಿಟಲ್ ಮಾಸ್ಟರ್ ಪ್ರಜ್ಞಾನಂದ ರೀತಿ ಚಾಂಪಿಯನ್ ಆಗಿ ಹೊರಹೊಮ್ಮಬಹುದು. ನಿಮಗೆಲ್ಲರಿಗೂ ಶುಭವಾಗಲಿ, ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಡ್ಯ ಚೆಸ್ ಆಕಾಡೆಮಿಯ ಅಧ್ಯಕ್ಷ ಮಂಜುನಾಥ ಜೈನ್, ಇಂದಿನ ಟೂರ್ನಿಯಲ್ಲಿ ಮೂರುವರೆ ವರ್ಷದಿಂದ 7 ವರ್ಷದ ಒಳಗಿನ ಮಕ್ಕಳು ಭಾಗವಹಿಸುತ್ತಿದ್ದು, ಪ್ರತಿ ಚೆಸ್ ಆಟಗಾರನು 11 ರೌಂಡ್‍ಗಳನ್ನು ಆಡಬೇಕಾಗಿದೆ. ತಾನಾಡಿದ 11 ರೌಂಡ್‍ಗಳಲ್ಲಿ ಗಳಿಸುವ ಅಂಕಗಳನ್ನು ಆಧರಿಸಿ, ವಿಜೇತರನ್ನು ನುರಿತ ಅಂತರಾಷ್ಟ್ರೀಯ ಮಟ್ಟದ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ. ಇಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಪಡೆದ ಮಕ್ಕಳು, ಮುಂದೆ ನಡೆಯುವ ಏಷ್ಯಾ ಕಾಮನ್ ವೆಲ್ತ್ ಗೇಮ್‍ನಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಚೆಸ್ ಸಂಸ್ಥೆಯ ಕಾರ್ಯದರ್ಶಿ ಭರತ್‍ಸಿಂಗ್ ಚೌಹಾನ್, ವಿಶ್ವ ಚೆಸ್ ಫೆಡರೇಷನ್ ಉಪಾಧ್ಯಕ್ಷ ಡಿ.ವಿ.ಸುಂದರ್, ಕರ್ನಾಟಕ ಚೆಸ್ ಅಕಾಡೆಮಿಯ ಕಾರ್ಯದರ್ಶಿ ಅರವಿಂದಶಾಸ್ತ್ರಿ, ಸೆಂಟ್ ಮೇರಿಸ್ ಶಾಲೆಯ ಮುಖ್ಯಸ್ಥರಾದ ಸಿಸ್ಟರ್ ಮರ್ಸಿ, ನಮ್ರತಾ ರಿಪೈನರಿ ಸಂಸ್ಥೆಯ ಅರುಣ್‍ಕುಮಾರ್, ಡಾ.ಪದ್ಮಾಕ್ಷಿ ಲೋಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News