ಮಂಡ್ಯ: ಪ್ರತಿಭಟನಾ ನಿರತ ರೇಷ್ಮೆ ಬೆಳೆಗಾರ ಆತ್ಮಹತ್ಯೆಗೆ ಯತ್ನ; ಡಿಸಿ ವರ್ತನೆ ವಿರುದ್ಧ ರೈತರ ಆಕ್ರೋಶ

Update: 2018-07-16 17:50 GMT

ಮಂಡ್ಯ, ಜು.16: ರೇಷ್ಮೆಗೂಡಿಗೆ 500 ರೂ. ದರ ನಿಗದಿಗೆ ಆಗ್ರಹಿಸಿ ಸೋಮವಾರ ನಡೆದ ಪ್ರತಿಭಟನೆ ವೇಳೆ ರೇಷ್ಮೆಬೆಳೆಗಾರರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು.

ಮದ್ದೂರು ತಾಲೂಕು ಅಂಬರಹಳ್ಳಿ ಗ್ರಾಮದ ಚೌಡೇಗೌಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಜತೆಯಲ್ಲಿದ್ದ ರೈತರು ಹಾಗೂ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು.

ಪ್ರಕರಣದ ಹಿನ್ನೆಲೆ: ಮೆರವಣಿಗೆಯಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ಆವರಣಕ್ಕೆ ಆಗಮಿಸಿದ ರೇಷ್ಮೆಬೆಳೆಗಾರರು, ಧರಣಿ ನಡೆಸಿ, ಜಿಲ್ಲಾಧಿಕಾರಿ ಮನವಿ ಸ್ವೀಕರಿಸಬೇಕೆಂದು ಒತ್ತಾಯಿಸಿದರು. ಆದರೆ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸ್ಥಳಕ್ಕೆ ಆಗಮಿಸಲು ನಿರಾಕರಿಸಿದರು. ಇದರಿಂದ ಬೇಸರಗೊಂಡ ಚೌಡೇಗೌಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು ಎನ್ನಲಾಗಿದೆ. ಮತ್ತಿಬ್ಬರು ರೈತರಿಂದಲೂ ಪ್ರತಿಭಟನಾಕಾರರು ವಿಷದ ಬಾಟಲಿ ಕಿತ್ತುಕೊಂಡರು.

ರೈತರ ಆಕ್ರೋಶ ಭುಗಿಲೆದ್ದ ಮಾಹಿತಿ ಸಿಗುತ್ತಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಮಂಜುಶ್ರೀ ಮನವಿ ಸ್ವೀಕರಿಸಿದರು. ನಂತರ, ಪ್ರತಿಭಟನಾನಿರತ ರೈತರು ಜಿಲ್ಲಾಸ್ಪತ್ರೆಗೆ ತೆರಳಿ ತುರ್ತುಚಿಕಿತ್ಸಾ ವಿಭಾಗದ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿ, ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಾದ ಎಂ.ಶ್ರೀನಿವಾಸ್, ಕೆ.ಸುರೇಶ್‍ಗೌಡ, ಕೆ.ಟಿ.ಶ್ರೀಕಂಠೇಗೌಡರ ಜತೆ ಸ್ಥಳಕ್ಕೆ ಆಗಮಿಸಿದ ಸಚಿವ ಸಿ.ಎಸ್.ಪುಟ್ಟರಾಜು, ಚಿಕಿತ್ಸೆ ಪಡೆಯುತ್ತಿದ್ದ ಚೌಡೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ನಂತರ ಪ್ರತಿಭಟನಾ ನಿರತರಿಂದ ಮನವಿ ಸ್ವೀಕಿಸಿದ ಪುಟ್ಟರಾಜು, ಕೂಡಲೇ ಮುಖ್ಯಮಂತ್ರಿ ಜತೆ ಬೇಡಿಕೆಗಳ ಬಗ್ಗೆ ಮಾತನಾಡುತ್ತೇನೆ. ಕೇಂದ್ರದ ಬಳಿಯೂ ನಿಯೋಗ ಕರೆದೊಯ್ಯಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಿಷೇಧಿಸಲಾಗಿದೆ. ವ್ಯಾಪ್ತಿ ಹೊರಗೆ ಧರಣಿ ನಡೆಸಿದರೂ ಬಂದು ಮನವಿ ಸ್ವೀಕರಿಸುವುದಿಲ್ಲ ಜಿಲ್ಲಾಧಿಕಾರಿ ಮಹಾರಾಜರೆ ಎಂದು ರೈತಮುಖಂಡರು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಯಾವುದೇ ಪ್ರತಿಭಟನೆ, ಧರಣಿ ನಿಷೇಧಿಸಿರುವುದನ್ನು ತೆರವುಗೊಳಿಸುವಂತೆ ಕ್ರಮ ವಹಿಸಲಾಗುವುದು. ರೈತನ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು ಎಂದು ಸಚಿವ ಪುಟ್ಟರಾಜು ಭರವಸೆ ನೀಡಿದ ನಂತರ, ಪ್ರತಿಭಟನೆ ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News