×
Ad

ಮಂಡ್ಯ: ರೇಷ್ಮೆಗೆ 500 ರೂ. ದರ ನಿಗದಿಗೆ ಒತ್ತಾಯಿಸಿ ಧರಣಿ; ಕೇಂದ್ರ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ

Update: 2018-07-16 23:22 IST

ಮಂಡ್ಯ, ಜು.16: ಕೆಜಿ ರೇಷ್ಮೆಗೂಡಿಗೆ 500 ರೂ. ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಡ್ಯ ಜಿಲ್ಲಾ ರೇಷ್ಮೆ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ರೈತಸಂಘ, ಕರ್ನಾಟಕ ಪ್ರಾಂತ ರೈತಸಂಘ, ಕಸ್ತೂರಿ ಕನ್ನಡ ರಕ್ಷಣಾ ವೇದಿಕೆ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಚಂದ್ರಿಕೆ, ರೇಷ್ಮೆ ಸೊಪ್ಪು ಪ್ರದರ್ಶಿಸುವ ಮೂಲಕ ರೈತರು ತಮ್ಮ ಬೇಡಿಕೆಗೆ ಆಗ್ರಹಿಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ತೆರಳಿ ವಿಶ್ವೇಶ್ವರಯ್ಯ ಪ್ರತಿಮೆ ಆವರಣದಲ್ಲಿ ಧರಣಿ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಎರಡು ತಿಂಗಳ ಹಿಂದೆ ಕೆಜಿಗೆ 450-550 ರೂ.ತನಕ ಇದ್ದ ರೇಷ್ಮೆ ಗೂಡಿನ ದರ ಒಮ್ಮೆಲೇ 120-250 ರೂ.ಗೆ ಕುಸಿದಿದ್ದು, ರೇಷ್ಮೆ ಬೆಳೆಗಾರರು ಈ ನಷ್ಟವನ್ನು ಸಹಿಸಲು ಅಸಾಧ್ಯವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೃಷಿ ಬಿಕ್ಕಟ್ಟಿನ ಪರಿಣಾಮ ಎರಡೂವರೆ ವರ್ಷದಲ್ಲಿ ಸುಮಾರು 280 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಷ್ಮೆಗೂಡಿನ ದರದ ಕುಸಿತದಿಂದ ಈ ಆತ್ಮಹತ್ಯೆಗೆ ರೇಷ್ಮೆ ಬೆಳೆಗಾರರು ಸೇರ್ಪಡೆಗೊಳ್ಳುವ ಆತಂಕ ಉಂಟಾಗಿದೆ ಎಂದು ಎಂದು ಅವರು ಅಳಲು ತೋಡಿಕೊಂಡರು. ಕಚ್ಚಾ ರೇಷ್ಮೆ ಆಮದು ಸುಂಕವನ್ನು ಶೇ.31ಕ್ಕೆ ಏರಿಸಬೇಕು. ರೇಷ್ಮೆ ಬಟ್ಟೆ ಆಮದು ಸಂಪೂರ್ಣ ನಿಷೇಧಿಸಬೇಕು. ಬೆಂಬಲ ಬೆಲೆಗಿಂತ ಕಡಿಮೆ ಹರಾಜು ಆಗುವ ಕೆಜಿ ರೇಷ್ಮೆಗೂಡಿಗೆ 500 ರೂ.ಗೆ ಹೊಂದಾಣಿಕೆ ಆಗುವಂತೆ ಪ್ರೋತ್ಸಾಹ ಧನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇ.50 ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಶಾಸನ ಭದ್ರತೆ ಒದಗಿಸಬೇಕು. ಖಾಸಗಿ ಚಾಕಿ ರೇಷ್ಮೆಹುಳು ದರವನ್ನು ನಿಯಂತ್ರಿಸಬೇಕು. ಕರ್ನಾಟಕ ರೇಷ್ಮೆ ಮಾರುಕಟ್ಟೆ ನಿಗಮ(ಕೆಎಸ್‍ಎಂಬಿ) ಹಾಗೂ ಕರ್ನಾಟಕ ರೇಷ್ಮೆ ಕೈಗಾರಿಕೆ ಸಂಸ್ಥೆ(ಕೆಎಸ್‍ಐಸಿ) ಮೂಲಕ ರೇಷ್ಮೆನೂಲು ಖರೀದಿಸಬೇಕು ಎಂದು ಅವರು ಆಗ್ರಹಿಸಿದರು.

ಬೆಲೆ ಕುಸಿತದಿಂದ ನಷ್ಟಕ್ಕೀಡಾಗಿರುವ ಎಲ್ಲಾ ರೇಷ್ಮೆ ಬೆಳೆಗಾರರಿಗೆ ಬೆಳೆನಷ್ಟ ಪರಿಹಾರ ನೀಡಬೇಕು. ಕಳ್ಳ ಸಾಗಾಣಿಕೆಯಿಚಿದ ಆಮದಾಗುತ್ತಿರುವ ಕಚ್ಚಾ ರೇಷ್ಮೆಯನ್ನು ಸಂಪೂರ್ಣ ತಡೆಗಟ್ಟಬೇಕು. ಈ ಬೇಡಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ಪಂದಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಮಹಿಳಾಧ್ಯಕ್ಷೆ ಲತಾ ಶಂಕರ್, ಬಿ.ಬೊಮ್ಮೇಗೌಡ, ಕರ್ನಾಟಕ ಪ್ರಾಂತ ರೈತಸಂಘದ ಟಿ.ಯಶವಚಿತ, ಟಿ.ಎಲ್.ಕೃಷ್ಣೇಗೌಡ, ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‍ಗೌಡ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮಂಡ್ಯ ಜಿಲ್ಲಾ ರೇಷ್ಮೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜೋಗಿಗೌಡ, ಮಲ್ಲರಾಜು, ಆತ್ಮಾನಚಿದ, ಕೆ.ಎಂ.ರಾಮಕೃಷ್ಣ, ಕೆ.ಸಿ.ಕೃಷ್ಣಪ್ಪ, ಚನ್ನಪ್ಪ, ಇತರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News