ಚಿಕ್ಕಮಗಳೂರು: ಮಳೆಯಿಂದ ನಲುಗಿದ್ದ ಜನತೆಗೆ ಸದ್ಯ ಗಾಳಿಯ ಭೀತಿ; ಹಲವೆಡೆ ಧರೆಗುರುಳಿದ ಮರಗಳು

Update: 2018-07-16 18:23 GMT

ಚಿಕ್ಕಮಗಳೂರು, ಜು.16: ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಆರ್ಭಟಿಸಿದ್ದ ಮಳೆ ತಣ್ಣಗಾಗುತ್ತಿದ್ದಂತೆ ಆಷಾಡ ಮಾಸದ ಗಾಳಿ ತೀವ್ರಗೊಂಡಿದೆ. ಭಾರೀ ಗಾಳಿಯ ರಭಸಕ್ಕೆ ಜಿಲ್ಲಾದ್ಯಂತ ವಿದ್ಯುತ್ ಕಂಬಗಳ ಮೇಲೆ ಮರಬಿದ್ದು ನೂರಾರು ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಕೊಪ್ಪಸೇರಿದಂತೆ ಎಲ್ಲೆಡೆ ಗಾಳಿಯ ತೀವ್ರತೆ ಹೆಚ್ಚಾಗಿದೆ. ಕಳೆದ 8-9 ವರ್ಷಗಳಲ್ಲಿ ಆಷಾಡ ಮಾಸದಲ್ಲಿ ಈ ರೀತಿಯ ಗಾಳಿ ಆರ್ಭಟ ಕಂಡಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮೂಡಿಗೆರೆ ತಾಲೂಕಿನಲ್ಲಿ ಗಾಳಿಯ ಅಬ್ಬರ ತೀವ್ರವಾಗಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಕಳಸ, ಕುದುರೆಮುಖ, ಚಾರ್ಮಾಡಿ ಘಾಟಿ ಪ್ರದೇಶಗಳಲ್ಲಿ ಗಾಳಿಯ ರಭಸ ತೀವ್ರವಾಗಿದ್ದು, ಭಾರೀ ಗಾತ್ರದ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಲ ಭಾಗಲ್ಲಿ ಮನೆಯ ಮೇಲೆ ಮರಬಿದ್ದು ಮನೆಗೂ ಹಾನಿ ಉಂಟು ಮಾಡಿದೆ. ಮೂಡಿಗೆರೆಯ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಬಿದಿದ್ದು, ವಿದ್ಯುತ್ ಕಡಿತಗೊಂಡು ಜನತೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಚಿಕ್ಕಮಗಳೂರು ಸುತ್ತಮುತ್ತ ಗಾಳಿಯ ಅಬ್ಬರ ಹೆಚ್ಚಾಗಿದ್ದು, ಸೋಮವಾರ ಹೆಚ್ಚಿನ ಅನಾಹುತ ಸಂಭವಿಸದಿದ್ದರೂ ರವಿವಾರ ಬೀಸಿದ ಗಾಳಿಯ ರಭಸಕ್ಕೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಸೋಮವಾರ ದುರಸ್ತಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆ ಸೋಮವಾರವೂ ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಎನ್.ಆರ್.ಪುರ ತಾಲೂಕಿನಲ್ಲಿಯೂ ಭಾರೀ ಗಾಳಿ ಬೀಸುತ್ತಿದ್ದು, ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿದ್ದ ಮರವೊಂದು ಸೋಮವಾರ ನೆಲಕ್ಕುರುಳಿದೆ. ತಾಲೂಕಿನಲ್ಲಿಯೂ ಹಲವೆಡೆಗಳಲ್ಲಿ ಮರ, ವಿದ್ಯುತ್ ಕಂಬಗಳು ಬಿದ್ದ ವರದಿಯಾಗಿದೆ. ಶೃಂಗೇರಿ ಹಾಗೂ ಕೊಪ್ಪತಾಲೂಕುಗಳಲ್ಲಿಯೂ ತುಂತುರು ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿತ್ತು. ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲಿ ಗಾಳಿಯ ತೀವ್ರೆತೆ ಹೆಚ್ಚಿತ್ತು. ಜಿಲ್ಲಾದ್ಯಂತ ಮಳೆ ಕಡಿಮೆಯಾದರೂ ಆಷಾಡ ಮಾಸದ ಗಾಳಿಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News