70 ಸಾವಿರ ಬ್ಯಾಂಕ್ ಸಿಬ್ಬಂದಿಗೆ ನೋಟು ರದ್ದತಿ ಶಾಕ್ !

Update: 2018-07-17 04:56 GMT

ಹೊಸದಿಲ್ಲಿ, ಜು. 17: ನೋಟು ರದ್ದತಿ ಸಂದರ್ಭದಲ್ಲಿ ಹಗಲಿರುಳು ಕಾರ್ಯ ನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿ ಪಾಲಿಗೆ ಕರಾಳ ಎನಿಸುವ ಆದೇಶವನ್ನು ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿದ ಭಾರತೀಯ ಸ್ವೇಟ್‌ ಬ್ಯಾಂಕ್ ಹೊರಡಿಸಿದೆ.

ಸ್ಟೇಟ್‌ಬ್ಯಾಂಕ್ ವಿಲೀನಕ್ಕೆ ಮುನ್ನ ವಿವಿಧ ಸಹವರ್ತಿ ಸ್ಟೇಟ್‌ಬ್ಯಾಂಕ್‌ಗಳಲ್ಲಿ ಕೆಲಸ ಮಾಡುತ್ತಿದ್ದ 70 ಸಾವಿರ ಅಧಿಕಾರಿಗಳಿಗೆ ನೀಡಿದ ಹೆಚ್ಚುವರಿ ಕೆಲಸದ ಭತ್ಯೆಯನ್ನು ವಸೂಲಿ ಮಾಡಿಕೊಳ್ಳುವಂತೆ ಎಸ್‌ಬಿಐ ಇದೀಗ ಎಲ್ಲ ವಲಯ ಕಚೇರಿಗಳಿಗೆ ಸೂಚನೆ ನೀಡಿದೆ.

ನೋಟು ರದ್ದತಿ ಅವಧಿಯಲ್ಲಿ ಅಂದರೆ 2016ರ ನವೆಂಬರ್ 14ರಿಂದ ಡಿಸೆಂಬರ್ 30ರವರೆಗೆ ರಾತ್ರಿ 7 ಗಂಟೆಯ ಬಳಿಕ ಕೂಡಾ ಕರ್ತವ್ಯ ನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿಗೆ ಸುಮಾರು 15 ಸಾವಿರ ರೂಪಾಯಿಯಿಂದ 30 ಸಾವಿರ ರೂಪಾಯಿವರೆಗೂ ಹೆಚ್ಚುವರಿ ಕೆಲಸದ ಭತ್ಯೆ ನೀಡಲಾಗಿತ್ತು. ಆಯಾ ಅಧಿಕಾರಿಯ ವೇತನಶ್ರೇಣಿಗೆ ಅನುಗುಣವಾಗಿ ಈ ಭತ್ಯೆ ನೀಡಲಾಗಿತ್ತು. ಹೀಗೆ ನೀಡಲಾದ ಹೆಚ್ಚುವರಿ ಹಣವನ್ನು ಆ ಅಧಿಕಾರಿಗಳಿಂದ ವಸೂಲಿ ಮಾಡುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಬ್ಯಾಂಕ್‌ಗಳ ವಿಲೀನಕ್ಕೆ ಮುನ್ನ ಈ ಅಧಿಕಾರಿಗಳು ಎಸ್‌ಬಿಐ ಉದ್ಯೋಗಿಗಳಾಗಿರಲಿಲ್ಲ. ಅವರಿಗೆ ಈ ಹಣವನ್ನು ನೀಡುತ್ತೇವೆ ಎಂಬ ಯಾವ ಭರವಸೆಯನ್ನೂ ಎಸ್‌ಬಿಐ ನೀಡಿರಲಿಲ್ಲ ಎಂದು ಆಂತರಿಕ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಅಧಿಕಾರಿಗಳಿಗೆ ಹೆಚ್ಚುವರಿ ಭತ್ಯೆ ನೀಡಲು ಯಾವ ಪರಿಸ್ಥಿತಿಯಲ್ಲಿ ಅನುಮೋದನೆ ನೀಡಲಾಗಿದೆ ಎಂಬ ಬಗ್ಗೆಯೂ ಪರಿಶೀಲನೆ ನಡೆಯಬೇಕು ಎಂದು ಹೇಳಲಾಗಿದೆ.

ಸ್ಟೇಟ್‌ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್ ಮತ್ತು ಸ್ಟೇಟ್‌ಬ್ಯಾಂಕ್ ಆಫ್ ಬಿಕನೇರ್, ಜೈಪುರ 2017ರ ಎಪ್ರಿಲ್ 1ರಂದು ಎಸ್‌ಬಿಐನಲ್ಲಿ ವಿಲೀನವಾಗಿದ್ದವು. ನೋಟು ರದ್ದತಿ ಅವಧಿಯಲ್ಲಿ ಈ ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 70 ಸಾವಿರ ಉದ್ಯೋಗಿಗಳು ಹೆಚ್ಚುವರಿ ಭತ್ಯೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News