ರೈತರು ಇತರೆ ಕಾರಣಕ್ಕೆ ಸತ್ತರೂ ಸಾಲಬಾಧೆಯಿಂದ ಆತ್ಮಹತ್ಯೆ ಎನ್ನುತಾರೆ: ಕೃಷಿ ಸಚಿವ ಶಿವಶಂಕರರೆಡ್ಡಿ
ಕಲಬುರ್ಗಿ, ಜು.17: ರೈತರು ಇತರೆ ಕಾರಣಗಳಿಗೆ ಸತ್ತರೂ ಸಾಲಬಾಧೆಯಿಂದಲೆ ಆತ್ಮಹತ್ಯೆಗೆ ಈಡಾಗಿದ್ದಾನೆ ಎಂದು ಬಿಂಬಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸಾಲ ಮನ್ನಾ ಘೋಷಣೆಯ ನಂತರವೂ ರಾಜ್ಯದಲ್ಲಿ ಆತ್ಮಹತ್ಯೆಗಳು ನಡೆದಿವೆ. ಬೇರೆ ಕಾರಣಕ್ಕೆ ಸತ್ತರೂ ಆತ ರೈತ ಎಂಬ ಒಂದೇ ಕಾರಣಕ್ಕೆ ಸಾಲಬಾಧೆಯಿಂದ ಸತ್ತಿದ್ದಾನೆ ಎಂದು ಬಿಂಬಿಸಲಾಗುತ್ತಿದೆ. ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡವರ ಹೆಸರಲ್ಲಿ ಜಮೀನೇ ಇರುವುದಿಲ್ಲ. ಆದರೂ ಅಂಥವರು ಸತ್ತಾಗ ಸಾಲಬಾಧೆ ತಾಳದೆ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದರು.
ಆತ್ಮಹತ್ಯೆಗೀಡಾದ ರೈತರ ಹಿನ್ನೆಲೆ ಗೊತ್ತಿಲ್ಲದೆ ಇಂತಹ ಕಾರಣಕ್ಕಾಗಿಯೆ ಸತ್ತಿದ್ದಾರೆ ಎಂದು ಹೇಳುವುದು ತಪ್ಪಾಗುತ್ತದೆ. ರೈತರ ಆತ್ಮಹತ್ಯೆ ಖಾತ್ರಿ ಮಾಡಲೆಂದೇ ಒಂದು ಸಮಿತಿಯಿದ್ದು, ಆ ಸಮಿತಿ ಏನು ವರದಿ ಕೊಡುತ್ತದೆಯೋ ಅದೇ ಅಂತಿಮವಾಗುತ್ತದೆ. ಆದರೆ, ಈ ರೀತಿ ಸತ್ತವರೆಲ್ಲರನ್ನು ಸಾಲಬಾಧೆಯಿಂದ ಸತ್ತಿದ್ದಾರೆ ಎಂದು ಬಿಂಬಿಸೋದು ಸರಿಯಲ್ಲ. ರಾಜ್ಯ ಸರಕಾರ ರೈತರ ಪರವಿದ್ದು, ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಬೆಳೆ ವಿಮೆ ಹಣ ಸಮರ್ಪಕವಾಗಿ ಬಿಡುಗಡೆಯಾಗದಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ತಾರತಮ್ಯವಾಗಿರುವುದು ಗಮನಕ್ಕೆ ಬಂದಿದೆ. ಅದನ್ನು ಶೀಘ್ರವೇ ಸರಿಪಡಿಸುವುದಾಗಿ ಹೇಳಿದರು.