×
Ad

ದಾವಣಗೆರೆ: ಬೊಂದಾಡೆ ಇಂಡಸ್ಟ್ರೀಸ್ ಪರವಾನಗಿ ರದ್ದುಪಡಿಸಲು ಜಿಲ್ಲಾಧಿಕಾರಿ ರಮೇಶ್ ಸೂಚನೆ

Update: 2018-07-17 20:39 IST

ದಾವಣಗೆರೆ,ಜು.17: ಕೈಗಾರಿಕಾ ಉದ್ದೇಶಿತ ಚಟುವಟಿಕೆಗೆ ಬಳಸದೇ ಬಯೋ ಡೀಸೆಲ್ ಚಟುವಟಿಕೆಗೆ ಯೋಜನೆ ಬದಲಾವಣೆ ಕೋರಿ ಅರ್ಜಿ ನೀಡಿದ ಮೆ|| ಬೊಂದಾಡೆ ಇಂಡಸ್ಟ್ರೀಸ್ ಅವರ ಪರವಾನಗಿ ರದ್ದುಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 89ನೇ ಏಕಗವಾಕ್ಷಿ ಸಭೆಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೆ|| ಬೊಂದಾಡೆ ಇಂಡಸ್ಟ್ರೀಸ್ ಇವರು ಹರಿಹರದ ಹನಗವಾಡಿಯಲ್ಲಿ ಹಿಂದೆ ಪಡೆದಿದ್ದ ಘಟಕ ಮೊದಲು ಮಂಜೂರಾತಿ ಪಡೆದ ಘಟಕದಲ್ಲಿ ಉದ್ದೇಶಿತ ಚಟುವಟಿಕೆಯನ್ನು ನಿಗದಿತ ಎರಡು ವರ್ಷದಲ್ಲಿ ಆರಂಭಿಸದೆ, ಇದೀಗ ಬಯೋ ಡೀಸೆಲ್ ಚಟುವಟಿಕೆಗೆ ಯೋಜನೆ ಬದಲಾವಣೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ನಿಯಮನುಸಾರ ಪುರಸ್ಕರಿಸಲು ಬರುವುದಿಲ್ಲವಾದ್ದರಿಂದ ಅದನ್ನು ರದ್ದುಪಡಿಸಲು ಕೆಐಎಡಿಬಿ ಅಧಿಕಾರಿಗೆ ಸೂಚಿಸಿದರು.

ಮಾಲೀಕರು ತಮ್ಮ ಹೊಸ ಯೋಜನೆ ನಾವೀನ್ಯತೆಯಿಂದ ಕೂಡಿದ್ದು, ಬದಲಾವಣೆ ಮಾಡಿಕೊಡುವಂತೆ ಮನವಿ ಮಾಡಿದಾಗ ಜಿಲ್ಲಾಧಿಕಾರಿ, ನಿಯಮಗಳು ಎಲ್ಲರಿಗೂ ಅನ್ವಯ. ತಾವು ಹಿಂದಿನ ಯೋಜನೆಗೆ ಬಂಡವಾಳ ಹೂಡಿ, ನಿಯಮಾನುಸಾರ ಕೈಗೊಳ್ಳುವಷ್ಟು ಚಟುವಟಿಕೆ ಕೈಗೊಂಡಿದ್ದರೆ ಆ ಯೋಜನೆ ಅವಧಿ ವಿಸ್ತರಣೆ ಅಥವಾ ಬದಲಾವಣೆ ನೀಡಬಹುದಿತ್ತು. ನೋಟಿಸ್ ನೀಡಿದರೂ ಯಾವುದೇ ಚಟುವಟಿಕೆಯನ್ನೇ ಕೈಗೊಳ್ಳದೆ ಅವಧಿ ಮೀರಿದ ಮೇಲೆ ಯೋಜನೆ ಬದಲಾವಣೆ ಪ್ರಸ್ತಾಪವನ್ನು ಮಾನ್ಯ ಮಾಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.

ಕೆಎಸ್‍ಎಸ್‍ಐಡಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ಕೊಗ್ಗನೂರಿನ ಕರಿಬಸಪ್ಪ ಎಂಬವರಿಗೆ ಕೈಗಾರಿಕೆ ಸ್ಥಾಪಿಸಲು ಮಂಜೂರಾಗಿರುವ ಜಾಗ ಆ ಗ್ರಾಮದ ಶಾಲೆಯ ಬಿಸಿಯೂಟ ತಯಾರಿಸಲು ಬಳಸಿಕೊಳ್ಳಲಾಗುತ್ತಿದೆ. ಆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಗ್ರಾಮಸ್ಥರು, ಎಸ್‍ಡಿಎಂಸಿ ಅಡ್ಡಿಪಡಿದೆ ಎಂದರು.

ಜಿಲ್ಲಾಧಿಕಾರಿ ಮಾತನಾಡಿ, ಆಸ್ತಿ ಹಕ್ಕು ಯಾರದ್ದು ಎಂದು ಸ್ಪಷ್ಟಪಡಿಸಿಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲು ತಿಳಿಸಿದಾಗ, ಅಧಿಕಾರಿ ಮಾತನಾಡಿ, ಆಸ್ತಿ ಕೆಎಸ್‍ಎಸ್‍ಐಡಿಸಿಗೆ ಸೇರಿದ್ದಾಗಿದ್ದು, 1992 ರಿಂದ ಯಾವುದೇ ಚಟುವಟಿಕೆ ನಡೆದಿಲ್ಲ. ಹಿಂದೆ ಅಲ್ಲಿ ಒಂದು ಯೋಜನೆಯಡಿ ಟೈಲರಿಂಗ್ ಕಲಿಸಲು ಮಳಿಗೆ ಹಾಕಲಾಗಿತ್ತು. ಆ ಯೋಜನೆ ನಿಂತ ನಂತರ ಶಾಲೆಯವರಿಗೆ ಬಾಡಿಗೆ ಷರತ್ತಿಗೊಳಪಡಿಸಿ ಆ ಜಾಗ ಅವರಿಗೆ ನೀಡಲಾಗಿತ್ತು ಎಂದರು. ಜಿಲ್ಲಾಧಿಕಾರಿಗಳು ಎಸ್‍ಡಿಎಂಸಿ ಅವರಿಗೆ ವಸ್ತುಸ್ಥಿತಿ ತಿಳಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದರು.

ಹರಿಹರ ಕೈಗಾರಿಕಾ ವಸಾಹತುವಿನ 2ನೆ ಹಂತದ ನಿವೇಶನಗಳಿಗೆ ಭೂ ಪರಿಹಾರ ಮೊತ್ತವನ್ನು ಹಂಚಿಕೆದಾರರಿಂದ ಪಾವತಿಸಿಕೊಳ್ಳಲು ರು. 10 ನ್ನು ನಿಗದಿಪಡಿಸುವಂತೆ ಮಂಡಳಿಗೆ ಜನವರಿಯಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿಂದೆ 15 ದಿನಗಳ ಒಳಗೆ ಮಂಡಳಿಯಿಂದ ದರ ನಿಗದಿಯಾಗುತ್ತದೆಂದು ಹೇಳಲಾಗಿತ್ತಾದರೂ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಸೂಕ್ತ ಜರುಗಿಸುವಂತೆ ಹಂಚಿಕೆದಾರರು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈ ಸಭೆಯಲ್ಲಿ ಹಂಚಿಕೆದಾರರು ದರ ನಿಗದಿ ಬಗ್ಗೆ ಒತ್ತಾಯಿಸಿರುವ ಬಗ್ಗೆ ಸಭಾ ನಡವಳಿಯಲ್ಲಿ ದಾಖಲಿಸಿ ಮಂಡಳಿಗೆ ಕಳುಹಿಸಿಕೊಡುವಂತೆ ಸೂಚಿಸಿದರು.

ದಾವಣಗೆರೆ ನಗರದ ಕರೂರು ಕೈಗಾರಿಕಾ ಪ್ರದೇಶದ ನಿವೇಶನ ಸಂ: 64ಎ ರಲ್ಲಿ ಅಸ್ಮಾ ಟೆಕ್ಸ್ ಗಾರ್ಮೆಂಟ್ಸ್ ಇವರಿಗೆ ಹಂಚಿಕೆಯಾಗಿದ್ದ ರೆಡಿಮೇಡ್ ಗಾರ್ಮೆಂಟ್ಸ್ ನಲ್ಲಿ ನೆಲ ಮಹಡಿ ಡಿಬಿಎ ಕಂಪೆನಿಯರಿಗೆ ಅನಧಿಕೃತವಾಗಿ ಬಾಡಿಗೆ ನೀಡಿದ್ದಾರೆ ಎಂದು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಬಸವರಾಜಪ್ಪ ಹೇಳಿದರು.

ಅಸ್ಮಾ ಟೆಕ್ಸ್ ಗಾರ್ಮೆಂಟ್ಸ್ ಮಾಲೀಕ ಮಾತನಾಡಿ, ಮೊದಲನೆ ಮತ್ತು ಎರಡನೇ ಮಹಡಿಯಲ್ಲಿ ಗಾರ್ಮೆಂಟ್ಸ್ ಚಟುವಟಿಕೆ ನಡೆಯುತ್ತಿದೆ. ಆದರೆ ನೆಲಮಹಡಿಯಲ್ಲಿ ಡಿಬಿಎ ಕಂಪೆನಿಗೆ ಯುವಜನತೆಗೆ ತರಬೇತಿ ನೀಡಲು ಬಾಡಿಗೆ ನೀಡಲಾಗಿದೆ. ಈ ಬಗ್ಗೆ ಪತ್ರ ಕೆಐಎಡಿಬಿಗೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಕೇವಲ ಪತ್ರ ಬರೆಯದೇ, ನಿಯಮಾನುಸಾರ ಅನುಮತಿ ಪಡೆದು ಬಾಡಿಗೆ ನೀಡುವಂತೆ ಸೂಚಿಸಿದರು.

ಮೆ. ಆಂಜನೇಯ ಅಗ್ರೋಟೆಕ್ ಪ್ರೈ. ಲಿ ಇವರಿಗೆ ಹರಿಹರದಲ್ಲಿ 4.00 ಎಕರೆ ಕೆಐಎಡಿಬಿ ಯಿಂದ ಹಂಚಿಕೆಯಾಗಿ ಅವರ ಘಟಕದ ಹೆಸರಿನಲ್ಲಿ ಶುದ್ದ ಕ್ರಯ ಆಗಿದ್ದು, ಖರಾಬು ಜಮೀನಿಗೂ ಅವರು ಹಣ ಪಾವತಿಸಿರುತ್ತಾರೆ. ಖರಾಬು ಜಮೀನು ಕೆಐಎಡಿಬಿ ಹೆಸರಿಗೆ ಖಾತೆ ಬದಲಾವಣೆ ಆಗದ ಕಾರಣ ಶುದ್ದ ಕ್ರಯಪತ್ರ ನೋಂದಣಿ ಸಾಧ್ಯವಿಲ್ಲವೆಂದು ಹರಿಹರ ತಹಸೀಲ್ದಾರ್ ತಿಳಿಸಿರುತ್ತಾರೆಂದು ಬಸವರಾಜಪ್ಪ ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಜಮೀನಿನ ಮಧ್ಯದಲ್ಲಿ ಬರುವ ಖರಾಬು ಭೂಮಿಗೆ ಹಕ್ಕು ಕೊಡಲು ಬರುವುದಿಲ್ಲ. ಮಾಲೀಕರು ಅದನ್ನು ಅನುಬೋಗಿಸಬಹುದಾಗಿದ್ದರೂ ಅದರ ಹಕ್ಕನ್ನು ನೀಡಲು ಬರುವುದಿಲ್ಲ. ಇದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆ ಸೂಚಿಸಿದರು.
ಪಶು ಮತ್ತು ಕುಕ್ಕಟ ಆಹಾರ ತಯಾರಿಕೆ, ಮೆಜ್ ಗ್ರಿಟ್(ಎರಡು) ಸೇರಿದಂತೆ ಒಟ್ಟು 3 ಹೊಸ ಕೈಗಾರಿಕೆಗಳ ಸ್ಥಾಪನೆಗೆ ನಿರಾಕ್ಷೇಪಣೆ ಪತ್ರ ಪಡೆಯಲು ಸಲ್ಲಿಸಲಾಗಿದ್ದ ಪ್ರಸ್ತಾವನೆ ಸಭೆಯಲ್ಲಿ ಅನುಮೋದಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸತ್ಯನಾರಾಯಣ ಭಟ್, ಸಹಾಯಕ ನಿರ್ದೇಶಕ ಮಂಜುನಾಥ್, ಕೈಗಾರಿಕಾ ಸಂಘಗಳ ಪದಾಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News