ಪ್ರತಿಯೊಬ್ಬರಿಗೂ ಸೂರು, ಸ್ಮಶಾನಕ್ಕೆ ಜಾಗ ಕಲ್ಪಿಸಿ: ಅಧಿಕಾರಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಸೂಚನೆ
ಮೈಸೂರು,ಜು.17: ಪ್ರತಿಯೊಬ್ಬರಿಗೂ ಸೂರು ಮತ್ತು ಗ್ರಾಮಗಳಲ್ಲಿ ಸ್ಮಶಾನಗಳಿಗೆ ಜಾಗ ಕಲ್ಪಿಸಿಕೊಡುವತ್ತ ಅಧಿಕಾರಿಗಳು ಗಮನ ಹರಿಸಿ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಸೆನೆಟ್ ಭವನದಲ್ಲಿ ಮಂಗಳವಾರ ಚಾಮುಂಡೇಶ್ವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರದ ಪ್ರತಿಯೊಬ್ಬರು ಒಂದು ಮನೆಯನ್ನು ಹೊಂದಿರಬೇಕು. ಯಾರಿಗೆ ಮನೆಯಿಲ್ಲವೋ ಅಂತಹವರನ್ನು ಗುರುತಿಸಿ ಅವರಿಗೆ ಜಾಗ ನೀಡಿ ಮನೆಕಟ್ಟಿಕೊಡಿ. ಗ್ರಾಮಗಳಲ್ಲಿ ಬಲಿಷ್ಟರು ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ ಬಡವರು ವಂಚಿತರಾಗುತ್ತಾರೆ. ಅಂತಹವರನ್ನು ಗುರುತಿಸಿ ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದು ಹೇಳಿದರು.
ಪ್ರತಿಯೊಂದು ಗ್ರಾಮಕ್ಕೆ ಒಂದು ಸ್ಮಶಾನಬೇಕು. ಹಾಗಾಗಿ ಗ್ರಾಮದಲ್ಲಿರುವ ಸರಕಾರಿ ಜಾಗವನ್ನು ಗುರುತಿಸಿ ಅಲ್ಲಿಗೆ ಹದ್ದುಬಸ್ತು ಕಲ್ಪಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಿ. ಅದಕ್ಕೆ ಬೇಕಾದ ಹಣವನ್ನು ಜಿಲ್ಲಾಧಿಕಾರಿಗಳು ನೀಡಲಿದ್ದಾರೆ ಎಂದು ಹೇಳಿದರು.
ಗ್ರಾಮಪಂಚಾಯತ್ ಗಳ ಪಿಡಿಓ, ಸರ್ವೆಯರ್ ಮತ್ತು ಗ್ರಾಮಲೆಕ್ಕಿಗರು ಸಮನ್ವಯ ಮಾಡಿಕೊಂಡು ಕೆಲಸ ಮಾಡಿ ಆಗ ಗ್ರಾಮಗಳ ಅಭಿವೃದ್ಧಿಯಾಗುತ್ತದೆ. ಒಬ್ಬೊಬ್ಬರು ಒಂದೊಂದು ಕಡೆ ಹೋದರೆ ಯಾವುದೇ ಕೆಲಸಗಳಾಗುವುದಿಲ್ಲ. ಪ್ರತಿ ಸೋಮವಾರ ಪ್ರತಿಯೊಂದು ಗ್ರಾಮ ಪಂಚಾಯತ್ ಗಳಲ್ಲಿ ಪಿಡಿಓ, ಸರ್ವೆಯರ್ ಮತ್ತು ಗ್ರಾಮಲೆಕ್ಕಿಗರು ಇರಬೇಕು. ಆ ಊರಿನ ಜನರ ಕಷ್ಟಗಳನ್ನು ಆಲಿಸಿ ಪರಿಹರಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ.ಮುಖ್ಯ ಕಾರ್ಯನರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿ.ಸಿ.ಪಿಗಳಾದ ವಿಷ್ಣುವರ್ಧನ್, ಡಾ.ವಿಕ್ರಂ ಆಮ್ಟೆ, ಚೆಲುವಾಂಬ ಆಸ್ಪತ್ರೆ ಅಧೀಕ್ಷಕಿ ಡಾ.ರಾಧಾಮಣಿ, ಜಿ.ಪಂ ಸದಸ್ಯ ಬೀರಿಹುಂಡಿ ಬಸವಣ್ಣ, ಸೇರಿದಂತೆ ಹಲವಾರು ಅಧಿಕಾರಿಗಳು ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಕೆಲಸ ಮಾಡದ ಅಧಿಕಾರಿಗಳ ಆಕ್ರೋಶ
ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ತಮಗೆ ಇಷ್ಟಬಂದ ರೀತಿಯಲ್ಲಿ ವರ್ತಿಸುತ್ತಿದ್ದೀ. ಇಷ್ಟು ದಿನ ನಿಮ್ಮ ಇಷ್ಟಬಂದಹಾಗೆ ನಡೆದುಕೊಂಡಿದ್ದೀರಿ. ಇನ್ನು ಮುಂದೆ ಇದೇ ರೀತಿ ನಿಮ್ಮ ವರ್ತನೆ ಮುಂದುವರೆದರೆ ಸಹಿಸಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಅವರು ಗರಂ ಆದರು.
ಬಡವರು, ರೈತರು, ಕೂಲಿಕಾರ್ಮಿಕರು ಬಂದರೆ ಅಸಡ್ಡೆ ತೋರುತ್ತೀರಿ, ನಿಮಗೆ ಮನುಷ್ಯತ್ವ ಎನ್ನುವುದು ಇಲ್ಲವೇ? ದಿನ ನಿತ್ಯ ಹಲವಾರು ಬಡವರು ನನ್ನ ಮನೆಮುಂದೆ ಬಂದು ಸಣ್ಣ ಪುಟ್ಟ ಕೆಲಸಗಳಿಗಾಗಿ ನಿಲ್ಲುತ್ತಾರೆ. ಅವರ ಕೆಲಸವನ್ನು ನೀವು ಮಾಡಿಕೊಟ್ಟಿದ್ದರೆ ನನ್ನ ಮನೆ ಬಳಿ ಏಕೆ ಬರುತ್ತಿದ್ದರು, ನಿಮಗೆ ಕೆಲಸ ಮಾಡಲು ಇಷ್ಟವಿದ್ದರೆ ಇರಿ. ಇಲ್ಲವೇ ಜಾಗ ಖಾಲಿ ಮಾಡಿ ಎಂದು ಎಚ್ಚರಿಕೆ ನೀಡಿದರು.
ದಿನ ನಿತ್ಯ ಬೆಳಿಗ್ಗೆ 5 ಗಂಟೆಗೆ ನಮ್ಮ ಮನೆ ಮುಂದೆ ಬಡವರು ಅರ್ಜಿ ಹಿಡಿದುಕೊಂಡು ಬಂದು ನಿಲ್ಲುತ್ತಾರೆ. ಅವರ ಪರಿಸ್ಥಿತಿ ನೋಡಿದರೆ ಹೊಟ್ಟೆ ಉರಿಯುತ್ತದೆ. ಅಂತಹವರ ಕೆಲಸಗಳನ್ನು ಪಿಡಿಓ ಗಳು ಮಾಡಿಕೊಡದೆ ಅಲೆಸುತ್ತಿದ್ದಾರಲ್ಲ ಎಂಬ ನೋವಿನಿಂದ ಮೊನ್ನೆ ಕೆಟ್ಟ ಪದ ಬಳಸಬೇಕಾಯಿತು ಎಂದು ಹೇಳಿದರು. ಚುನಾವಣೆ ಸಮಯದಲ್ಲಿ ಅಧಿಕಾರಿಗಳು ಏನು ಮಾಡಿದರು ಎಂದು ನನಗೆ ಗೊತ್ತು. ಆದರೂ ನಾನು ಯಾವೊಬ್ಬ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲ. ದಸರಾ ಮುಗಿಯುವವರಗೂ ಯಾವೊಬ್ಬ ಅಧಿಕಾರಿಯನ್ನು ಬದಲಾಯಿಸಬೇಡಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ಹಾಗಾಗಿ ನೀವು ಸಾರ್ವಜನಿಕರಿಗೆ ಸ್ಪಂಧಿಸಿ ಬಡವರ ಕಷ್ಟಗಳನ್ನು ಪರಿಹರಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಎಂದು ಹೇಳಿದರು.