ನಾಗಮಂಗಲ: ನಿಧಿಗಾಗಿ ಭೂಮಿ ಅಗೆದವರಿಗೆ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

Update: 2018-07-17 17:02 GMT

ನಾಗಮಂಗಲ, ಜು.17: ನಿಧಿ ಆಸೆಗಾಗಿ ಮಡಿಕೆ ಕುಡಿಕೆಗಳಿಂದ ಪೂಜೆ ಮಾಡಿ ಭೂಮಿ ಅಗೆಯುತ್ತಿದ್ದವರನ್ನು ಗ್ರಾಮಸ್ಥರೆ ಹಿಡಿದು ಧರ್ಮದೇಟು ನೀಡಿ, ಬೆಳ್ಳೂರು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಕಂಚನಹಳ್ಳಿಯಲ್ಲಿ ನಡೆದಿದೆ.

ನಿಧಿಗಾಗಿ ಭೂಮಿ ಅಗೆಯುತ್ತಿದ್ದ ಕಂಚನಹಳ್ಳಿಯ ಜಮೀನು ಮಾಲಕ ಚಿಕ್ಕೇಗೌಡ, ಬೆಂಗಳೂರಿನ ಬಾಬು, ಮಹೇಶ, ಗಂಗಹನುಮಯ್ಯ ಎಂಬವರನ್ನು ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ತಮ್ಮ ಜಮೀನಿನಲ್ಲಿ ಅಪಾರ ನಿಧಿ ಇದೆ ಎಂದು ಯಾರದೋ ಮಾತನ್ನು ನಂಬಿದ್ದ ಚಿಕ್ಕೇಗೌಡ, ನಿಧಿಯನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎಂದು ಪ್ರಯತ್ನ ಪಟ್ಟಿದ್ದನು ಎನ್ನಲಾಗಿದೆ. ಅದಕ್ಕಾಗಿ ಬೆಂಗಳೂರಿನ ನೆಲಮಂಗಲದವರಾದ ಓರ್ವ ಪಂಡಿತ ಸೇರಿ ಮೂವರನ್ನು ಕರೆತರಲಾಗಿತ್ತು, ಬೆಳಗ್ಗೆಯೇ ಜಮೀನಿನ ಹತ್ತಿರ ಗುರುತು ಮಾಡಿದ ಸ್ಥಳದಲ್ಲಿ ಮಡಿಕೆ ಕುಡಿಕೆಗಳನ್ನು ವೃತ್ತಾಕಾರದಲ್ಲಿ ಇಟ್ಟು ಪೂಜೆ ಮಾಡಿರುವ ನಿಧಿಗಳ್ಳರು, ಹಾರೆ ಗುದ್ದಲಿಗಳಿಂದ ಭೂಮಿ ಅಗೆಯುತ್ತಿದ್ದಾಗ ಅನುಮಾನಗೊಂಡ ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿದ್ದಾರೆ. 

ಈ ಸಂದರ್ಭದಲ್ಲಿ ಪೂಜೆ ಮಾಡಿರುವ ಪಂಡಿತ ಸೇರಿ ಇಬ್ಬರು ಪರಾರಿಯಾಗಿದ್ದು, ಇತರರನ್ನು ಗ್ರಾಮಸ್ಥರು ಹಿಡಿದು ಬೆಳ್ಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ಗಂಗಹನುಮಯ್ಯ ಬಾಬಣ್ಣ, ಮಹೇಶ ಎಂಬವರೇ ರೂವಾರಿಗಳು ಎಂದು ಹೇಳಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಕೂಡ ಒಮ್ಮೆ ಇದೇ ರೀತಿಯ ಪ್ರಯತ್ನ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬೆಳ್ಳೂರು ಠಾಣೆ ಪೊಲೀಸರು ಭೇಟಿ ಕೊಟ್ಟು ಯಾವುದೇ ನಿಧಿ ಸಿಕ್ಕರೂ ಅದು ಸರಕಾರದ ಸೊತ್ತಾಗುತ್ತದೆ. ಇಂತಹ ಕೃತ್ಯಗಳು ಕಾನೂನು ಬಾಹಿರ ಎಂದು ಜಮಾಯಿಸಿದ್ದ ಜನರಿಗೆ ಎಚ್ಚರಿಸಿದರು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News