ಧಾರವಾಹಿಗಳಲ್ಲಿ ಸ್ತ್ರೀಯರಿಗೆ ಅಗೌರವ: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಹುಳಿಯಾರು,ಜು.17: ಧಾರವಾಹಿಗಳಲ್ಲಿ ಸ್ತ್ರೀಯರಿಗೆ ಅಗೌರವ ಉಂಟಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಹುಳಿಯಾರು ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಬೆಂಗಳೂರಿನ ರಂಗಚೇತನ ಸಂಸ್ಕೃತಿ ಕೇಂದ್ರ ಹಾಗೂ ಹುಳಿಯಾರಿನ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ 3 ದಿನಗಳ ಕಾಲ ಏರ್ಪಡಿಸಿದ್ದ ಚಲನ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ಮೂಡಿ ಬರುತ್ತಿರುವ ಧಾರವಾಹಿಗಳಲ್ಲಿ ಬಹುತೇಕ ಸ್ತ್ರೀ ಪಾತ್ರಗಳನ್ನು ಹೊಟ್ಟೆಕಿಚ್ಚಿನ ಮೊಟ್ಟೆಗಳಾಗಿ, ಒಬ್ಬರಿಗೊಬ್ಬರು ಕಾಲೆಳೆಯುವವರಾಗಿ, ಕುಟುಂಬವನ್ನು ಹೊಡೆಯುವವರಾಗಿ ತೋರಿಸಲಾಗುತ್ತಿದೆ. ಒಟ್ಟಾರೆ ಸ್ತ್ರೀಯರನ್ನು ಕೇಡಿ ಲೇಡಿಗಳನ್ನಾಗಿ ಬಿಂಬಿಸಿ ವೀಕ್ಷಕರಲ್ಲಿ ಕೆಟ್ಟ ಅಭಿರುಚಿ, ಅಮಾನವೀಯ ಆಲೋಚನೆ ಬಿತ್ತುತ್ತಿದ್ದಾರೆ. ಹಾಗಾಗಿಯೇ ಇಂದು ಕೂಡು ಕುಟುಂಬಗಳು ಕಾಣಸಿಗದಾಗಿವೆ. ಸಂಸ್ಕಾರಗಳು ಮರೆಯಾಗುತ್ತಿವೆ ಎಂದರು.
ರಂಗಭೂಮಿಯ ರೀತಿ ಸಿನಿಮಾವೂ ಒಂದು ಶಿಕ್ಷಣವಾಗಿದ್ದು, ಒಂದು ಸಿನಿಮಾ ನೋಡುವುದರಿಂದ 10 ಪುಸ್ತಕಗಳನ್ನು ಓದಿದ ಅನುಭವ ನೀಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಫೈಟಿಂಗ್, ಧ್ವಂದಾರ್ಥದ ಸಿನಿಮಾಗಳು ಹೆಚ್ಚಾಗಿ ಕೆಟ್ಟ ಮತ್ತು ಕೀಳು ಮನೋಧರ್ಮವನ್ನು ಪ್ರೇರೇಪಿಸುತ್ತಿವೆ. ಹಾಗಾಗಿ ಮಕ್ಕಳಿಗೆ ತೋರಿಸುವ ಸಿನಿಮಾಗಳಾವುವು ಎನ್ನುವುದನ್ನು ಪೋಷಕರು ಮೊದಲು ನಿರ್ಧರಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹಳ್ಳಿಹಳ್ಳಿಗಳಲ್ಲಿ ಕಲಾತ್ಮಕ ಸಿನಿಮಾಗಳ ಪ್ರದರ್ಶನಗಳಾಗಬೇಕಿದೆ ಎಂದರು.
ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ.ಸತೀಶ್ ಕುಮಾರ್, ಸಿನಿಮಾ ನಿರ್ಮಾಪಕ ಎಸ್.ಪುಟ್ಟರಾಜು, ಹುಳಿಯಾರು ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಕೆಂಕೆರೆ ಗ್ರಾಪಂ ಅಧ್ಯಕ್ಷೆ ಆಶಾ ಉಮೇಶ್, ತಾಪಂ ಸದಸ್ಯ ಏಜೆಂಟ್ ಕುಮಾರ್, ಹಿರಿಯ ಸಿನಿಮಾ ಸಹಾಯಕ ನಿರ್ದೆಶಕ ಹುಳಿಯಾರ್ ಮಂಜು, ನಿರ್ದೆಶಕರುಗಳಾದ ಎಸ್.ಆರ್.ನಂಜುಂಡೇಗೌಡ, ಸಿರಿವರರವಿ, ಉಮಾಶಂಕರಸ್ವಾಮಿ, ಕಲಾವಿದ ಗೌಡಿ, ರಂಗಚೇತನ ಸಂಸ್ಕೃತಿ ಕೇಂದ್ರದ ವ್ಯವಸ್ಥಾಪಕ ಧರ್ಮದರ್ಶಿ ತೊಟ್ಟವಾಡಿ ನಂಜುಂಡಸ್ವಾಮಿ, ಮಾತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು.