×
Ad

ಬಾಗೇಪಲ್ಲಿ: ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಲು ಒತ್ತಾಯಿಸಿ ಧರಣಿ

Update: 2018-07-17 22:51 IST

ಬಾಗೇಪಲ್ಲಿ,ಜು.17: ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ  ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭಧಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರವೇ ತಾಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ, ಎಸ್.ಬಿ.ಐ, ಕೆನರಾ ಬ್ಯಾಂಕ್, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸೇರಿದಂತೆ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಎಲ್ಲಾ ಬ್ಯಾಂಕ್‍ಗಳಲ್ಲಿ ಬ್ಯಾಂಕ್ ಸಿಬ್ಬಂದಿಯವರು  ಹಲವಾರು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಇಲ್ಲಿನ ಆಡಳಿತ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಕಲಿಯದೆ ಕೇವಲ ಇಂಗ್ಲೀಷ್, ಹಿಂದಿ,ತೆಲಗು ಮತ್ತಿತರ ರಾಜ್ಯಗಳಲ್ಲಿ ಆಡಳಿತ ಭಾಷೆಗಳಲ್ಲಿ ಮಾತನಾಡುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಭಾಗದ ಜನರು ನಾನಾ ಬ್ಯಾಂಕ್‍ಗಳಲ್ಲಿ ವ್ಯವಹಾರ ಮಾಡುವ ಸಂದರ್ಭ ಕನ್ನಡ ಭಾಷೆಯಲ್ಲಿ ಮಾಹಿತಿಯನ್ನು ಕೇಳಿದರೆ ನಮಗೆ ಕನ್ನಡ ಬರಲ್ಲ, ಇಂಗ್ಲೀಷ್ ಇಲ್ಲವೇ ಹಿಂದಿ ಭಾಷೆಯಲ್ಲಿ ಮಾತನಾಡಿ ಎನ್ನುತ್ತಾರೆ. ಇಂಗ್ಲೀಷ್ ಮತ್ತು ಹಿಂದಿ ಮಾತನಾಡಲು ಬಾರದ ಪರಿಣಾಮ ಬ್ಯಾಂಕ್‍ನಲ್ಲಿ ವ್ಯವಹಾರ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬ್ಯಾಂಕ್ ಕೆಲಸಕ್ಕೆ ಸೇರಿದ 6 ತಿಂಗಳ ಒಳಗೆ ಆ ಸ್ಥಳೀಯ ಭಾಷೆಯನ್ನು ಕಲಿಯಬೇಕು ಎಂಬ ಸ್ಪಷ್ಟ ನಿರ್ದೇಶನವಿದ್ದರೂ ಅದನ್ನು ಪಾಲಿಸದೆ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದ್ದಾರೆ. ವಿದ್ಯಾವಂತರಾದ ಇವರು ಕನ್ನಡವನ್ನು ಕಲಿಯುವುದು ಸಮಸ್ಯೆಯಲ್ಲ. ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಕಲಿತು ಈ ಭಾಗದ ಜನರಿಗೆ ಬ್ಯಾಂಕ್‍ಗಳಲ್ಲಿ ಸಂಪೂರ್ಣ ವ್ಯವಹಾರವನ್ನು ಕನ್ನಡದಲ್ಲಿಯೇ ಮಾಡುವಂತೆ ಒತ್ತಾಯಿಸಿದರು.

ಈ ಸಂದರ್ಭ ಕರವೇ ಮುಖಂಡರಾದ ಸುಜಾತಮ್ಮ ಶಿರೀಷಾ, ಶಾಂತಮ್ಮ, ರಿಯಾಜ್‍ವುಲ್ಲಾ, ನಟರಾಜ್, ಅತಾವುಲ್ಲಾ, ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಅನಿಲ್, ಶ್ರೀನಿವಾಸ್, ಶಾಹೀನಾ, ಮಂಜುನಾಥ್, ಚಿನ್ನು, ಆಲೀಮ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News