×
Ad

ಅನುಭವವಿಲ್ಲದೆ ಸಾಧನೆ ಅಸಾಧ್ಯ: ಶಾಸಕ ಕುಮಾರ ಬಂಗಾರಪ್ಪ

Update: 2018-07-17 22:56 IST

ಸೊರಬ, ಜು.17: ಅನುಭವವಿಲ್ಲದೆ ಸಾಧನೆ ಅಸಾಧ್ಯವಾಗಿದ್ದು, ನಾವು ಕಾರ್ಯನಿರ್ವಹಿಸುವ ಕ್ಷೇತ್ರಗಳಲ್ಲಿ ಅನುಭವ ಪಡೆಯುವುದು ಬಹಳ ಮುಖ್ಯ. ಜನಸೇವೆ ದೇಶದ ಸೇವೆ ಎಂಬ ಕಲ್ಪನೆ ನಮ್ಮದಾಗಿರಬೇಕೆಂದು ಶಾಸಕ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಮಕ್ಕಳ ತೀವ್ರ ನಿಗಾ ಘಟಕ ಹಾಗೂ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ, ಔಷಧಿ ಉಗ್ರಾಣ, ಜನ ಔಷಧಿ ಕೇಂದ್ರ ಮತ್ತು ಆಸ್ಪತ್ರೆಯ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿ ಸಿಬ್ಬಂದಿಯೊಂದಿಗೆ ಚರ್ಚಿಸಿ ನಂತರ ಆರೋಗ್ಯ ರಕ್ಷಾ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಬಾರಂಗಿ ಗ್ರಾಮದಲ್ಲಿನ ಆಸ್ಪತ್ರೆಯು 1993-94 ರಲ್ಲಿ ಮಂಜೂರಾಗಿದ್ದು ಕಟ್ಟಡ ತುಂಬಾ ಹಳೆಯದಾಗಿದ್ದು ಗೊಡೆಗಳು ಬಿರುಕು ಬಿಟ್ಟಿವೆ. ಪ್ರತಿನಿತ್ಯ 120 ರಿಂದ 130 ರೋಗಿಗಳು ಚಿಕಿತ್ಸೆಗಾಗಿ ಬರುವುದರಿಂದ ಒಬ್ಬರೇ ವೈದ್ಯರಿಗೆ ಹೊರೆಯಾಗುತ್ತಿದೆ. ಸ್ಟಾಫ್ ನರ್ಸ್‌ಗಳನ್ನು ನಿಯೋಜನೆ ಮಾಡಿದರೆ ಅನುಕೂಲವಾಗುತ್ತದೆ. ಅನುದಾನ ಬರುವಲ್ಲಿ ತಡವಾಗುವುದರಿಂದ ವಿದ್ಯುತ್ ಬಿಲ್ ಪಾವತಿಸಲು 3ರಿಂದ 4 ತಿಂಗಳು ವಿಳಂಬವಾಗುತ್ತದೆ. ಈ ಕಾರಣದಿಂದ ಮೆಸ್ಕಾಂನವರು ವಿದ್ಯುತ್ ಕಡಿತಗೊಳಿಸುತ್ತಾರೆ. ವಿದ್ಯುತ್ ಇಲ್ಲದಿದ್ದಲ್ಲಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಲು ಕಷ್ಟವಾಗುತ್ತದೆ ಸೇರಿದಂತೆ ಆಸ್ಪತ್ರೆಗಳಲ್ಲಿನ ಸಮಸ್ಯೆಗಳನ್ನು ಸಭೆಯಲ್ಲಿ ಶಾಸಕರ ಗಮನಕ್ಕೆ ತಂದರು.

ಶಾಸಕ ಕುಮಾರ ಬಂಗಾರಪ್ಪ ಸಮಸ್ಯೆಗಳನ್ನು ಆಲಿಸಿ, ದೊಡ್ಡ ದೊಡ್ಡ ಕಾರ್ಖಾನೆಗಳ, ಬೃಹತ್ ವಾಣಿಜ್ಯ ಕಟ್ಟಡಗಳ ಬಿಲ್ ಬಾಕಿ ಇದ್ದರೂ ಗಮನಹರಿಸದ ವಿದ್ಯುತ್ ಇಲಾಖೆಯವರು ಜನ ಸಾಮಾನ್ಯರ ಅರೋಗ್ಯದ ಸೇವೆಯಲ್ಲಿರುವ ಆಸ್ಪತ್ರೆಗಳ ವಿದ್ಯುತ್ ಕಡಿತ ಯಾವುದೇ ಕಾರಣಕ್ಕೂ ಸರಿಯಾದ ಕ್ರಮವಲ್ಲ. ಬಿಲ್ ಪಾವತಿಸಲು ವಿಳಂಬವಾದರೂ ಆಸ್ಪತ್ರೆಗಳ ವಿದ್ಯುತ್ ಕಡಿತಗೊಳಿಸದಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದರು.
ಆಸ್ಪತ್ರೆಗಳ ಕಟ್ಟಡಗಳನ್ನು ಪರಿಶೀಲಿಸಿ, ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಭೆಯಲ್ಲಿದ್ದ ಪಿಡಬ್ಲೂಡಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಲೋಕೇಶ್, ವೈದ್ಯರಾದ ಡಾ.ಇಂದುಮತಿ, ಡಾ. ಅಕ್ಷತಾ ಖಾನಾಪುರ್, ಡಾ.ಕಲ್ಲೇಶ್, ಡಾ.ಹರೀಶ್, ಪಟ್ಟಣ ಪಂಚಾಯತ್ ಸದಸ್ಯ ಎಂ.ಡಿ.ಉಮೇಶ್ ಆರೋಗ್ಯ ಮತ್ತು ರಕ್ಷಾ ಸಮಿತಿಯ ಸದಸ್ಯ ಯೂಸುಫ್ ಸಾಬ್ ಅಂಕರವಳ್ಳಿ ಸೇರಿದಂತೆ ತಾಲೂಕಿನ ವಿವಿಧ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತಿನಿತ್ಯ ಸರಕಾರಿ ಆಸ್ಪತ್ರೆಗೆ ಹತ್ತಾರು ತರಹದ ರೋಗಿಗಳು ಬರುವುದರಿಂದ ಸರಕಾರಿ ವೈದ್ಯರಿಗೆ ಹೆಚ್ಚಿನ ಅನುಭವವಿರುತ್ತದೆ. ನಾವು ನಿರ್ವಹಿಸುವ ಕಾರ್ಯ ಇಲಾಖೆ ಮತ್ತು ಸಾರ್ವಜನಿಕರಿಗೆ ಪಾರದರ್ಶಕವಾಗಿರಬೇಕು. ವೈದರು ತಮ್ಮ ಬೇಡಿಕೆಗಳೇನಾದರೂ ಇದ್ದಲ್ಲಿ ಕೂಡಲೇ ಇಲಾಖಾಧಿಕಾರಿಗಳ ಗಮನಕ್ಕೆ ತರಬೇಕು. ಕರ್ತವ್ಯ ನಿರ್ವಹಿಸಲು ಅವಶ್ಯವಿರುವ ಮೂಲ ಸೌಕರ್ಯಗಳನ್ನು ಕೇಳಿ ಪಡೆಯುವಲ್ಲಿ ಮುಂದಾಗಬೇಕು. ಸಂಬಳಕ್ಕೆ ಮಾತ್ರ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನು ನಾನು ಇಷ್ಟಪಡುವುದಿಲ್ಲ, ಸೇವಾ ಮನೋಭಾವ ಪ್ರದರ್ಶಿಸುವವರಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲು ಬದ್ಧನಾಗಿದ್ದೇನೆ.
-ಕುಮಾರ ಬಂಗಾರಪ್ಪ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News