ಭದ್ರಾವತಿ ಸರ್ಕಲ್ ಇನ್ಸ್ ಪೆಕ್ಟರ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಡಿ.ಸಿ ಕಚೇರಿ ಮುಂಭಾಗ ಪ್ರತಿಭಟನೆ
ಶಿವಮೊಗ್ಗ, ಜು. 17: ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ, ಭದ್ರಾವತಿ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಬಿ. ಅಶೋಕ್ ಕುಮಾರ್ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಮಂಗಳವಾರ ಭದ್ರಾವತಿ ತಾಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡ ವೆಂಕಟೇಶ್‍ರವರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಪತ್ರ ಅರ್ಪಿಸಿದರು.
ತಾವು ಕಳೆದ 30 ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದು, ದಲಿತ ಸಮುದಾಯಕ್ಕೆ ಸೇರಿದವನಾಗಿದ್ದೆನೆ. ಉಮೇಶ್ ಎಂಬ ಅಂಧ ವ್ಯಕ್ತಿಯು ಚೀಟಿ ವ್ಯವಹಾರ ನಡೆಸುತ್ತಿದ್ದು, ಹಲವರು ಇವರಿಗೆ ಮೋಸ ಮಾಡಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜು. 8 ರಂದು ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಪ್ರತಿ ದೂರುದಾರರ ವಿಚಾರಣೆ ನಡೆಯುತ್ತಿತ್ತು. ತಾನು ಕೂಡ ಕಚೇರಿಗೆ ತೆರಳಿದ್ದೆ. ಈ ವೇಳೆ ಸರ್ಕಲ್ ಇನ್ಸ್‍ಪೆಕ್ಟರ್ ಬಿ.ಅಶೋಕ್‍ಕುಮಾರ್ ರವರು ತನಗೆ ಕುಳಿತುಕೊಳ್ಳಲು ಕುರ್ಚಿ ನೀಡಲಿಲ್ಲ. ಬಾಯಿಗೆ ಬಂದಂತೆ ನಿಂದಿಸಿದರು. ಅವ್ಯಾಚ್ಯ ಶಬ್ದಗಳಿಂದ ಸಾರ್ವಜನಿಕರ ಎದುರು ಬೈದು ಅಪಮಾನ ಮಾಡಿದರು. ಜಾತಿ ನಿಂದನೆ ಮಾಡಿದ್ದಾರೆ ಎಂದು ಮನವಿ ಪತ್ರದಲ್ಲಿ ವೆಂಕಟೇಶ್‍ರವರು ದೂರಿದ್ದಾರೆ.
ಇದೇ ವೇಳೆ ತಮ್ಮ ಪತ್ನಿ ಜಲಜಾಕ್ಷಿಯವರನ್ನು ಕೂಡ ಸರ್ಕಲ್ ಇನ್ಸ್ ಪೆಕ್ಟರ್ ನಿಂದಿಸಿ, ಅಪಮಾನಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಎದುರು ಅಪಮಾನ ಮಾಡಿದ ಹಾಗೂ ಜಾತಿ ನಿಂದನೆ ಮಾಡಿದ ಸರ್ಕಲ್ ಇನ್ಸ್ ಪೆಕ್ಟರ್ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ವೆಂಕಟೇಶ್ ದಂಪತಿ ಆಗ್ರಹಿಸಿದ್ದಾರೆ.