ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಹಾನಿ: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

Update: 2018-07-17 17:44 GMT

ಚಿಕ್ಕಮಗಳೂರು, ಜು.17: ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ಮಾರಕ ರೋಗಗಳನ್ನೂ ತರುತ್ತವೆ. ಆದ್ದರಿಂದ ಇವುಗಳಿಂದ ದೂರವಿರಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಹೇಳಿದ್ದಾರೆ.

ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ತ್ರೈಮಾಸಿಕ, ಜಿಲ್ಲಾ ತಂಬಾಕು ನಿಷೇಧ ಕೋಶ ಮೇಲ್ವಿಚಾರಣೆ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಯಾವುದೇ ತಂಬಾಕು ಉತ್ಪಾದನೆಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗಬಹುದಾಗಿದ್ದು ಇವುಗಳಿಂದ ದೂರವಿರುವುದರೊಂದಿಗೆ ಉತ್ತಮ ಆರೋಗ್ಯ ಹೊಂದಬೇಕೆಂದು ಸಲಹೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದ್ದು, ಇದರ ಉಲ್ಲಂಘನೆಗೆ ದಂಡವಿದೆ. ಇವುಗಳ ಉಲ್ಲಂಘನೆ ಬಗ್ಗೆ ನಗರ ವ್ಯಾಪ್ತಿಯಲ್ಲಿ ನಗರಸಭೆಯ ಆರೋಗ್ಯಾಧಿಕಾರಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಪಿಡಿಒಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಶಾಲಾ ಕಾಲೇಜುಗಳ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದ್ದು, ಶಾಲಾ ಮುಖ್ಯಸ್ಥರು ಈ ಬಗ್ಗೆ ಪ್ರಚಾರ ಫಲಕಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು.

ತಾಲೂಕು ಮಟ್ಟಗಳಲ್ಲಿ ತನಿಖಾ ದಳ ತಂಡಗಳು ಕಾರ್ಯಚಟುವಟಿಕೆಗಳನ್ನು ಆಗಿಂದಾಗ್ಗೆ ಕೈಗೊಳ್ಳುವುದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಬೇಕೆಂದು ಕಟ್ಟು ನಿಟ್ಟಿನ ಆದೇಶ ನೀಡಿದರು.

ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲಿಕಾರ್ಜುನ್, ಜಿಲ್ಲಾ ಸರ್ಜನ್ ಡಾ.ದೊಡ್ಡಮಲ್ಲಪ್ಪ, ನಗರಸಭೆ ಆಯುಕ್ತೆ ತುಷಾರಮಣಿ, ವೈದ್ಯರಾದ ಡಾ. ಮಂಜುನಾಥ್, ಡಾ.ಕಿರಣ್, ಡಾ. ಅಶ್ವತ್ ಬಾಬು ಹಾಗೂ ಮತ್ತಿತರು ಉಪಸ್ಥಿತರಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News