ಮಡಿಕೇರಿ: ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ
ಮಡಿಕೇರಿ ಜು.17 : ಬಲಮುರಿ ವಾಟೆಕಾಡು ಮಾರ್ಗವಾಗಿ ಹೊದ್ದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮರು ಡಾಮರೀಕರಣ ಹಾಗೂ ಸಿಮೆಂಟ್ ರಸ್ತೆ ಕಾಮಗಾರಿ ನಡೆದು ಮೂರು ತಿಂಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಕಳಪೆ ಕಾಮಗಾರಿಯಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಆರೋಪಿಸಿ ರಸ್ತೆ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಗ್ರಾಮೀಣರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಾಲೇಮಾಡು ಹಾಗೂ ವಾಟೆಕಾಡು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿ, ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದಾರೆ. ಕೇವಲ ಮೂರು ತಿಂಗಳಲ್ಲಿ ರಸ್ತೆ ಕಿತ್ತು ಹೋಗಿದೆ, ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರೆ, ಬಹುಜನ ಕಾರ್ಮಿಕ ಸಂಘದ ಅಧ್ಯಕ್ಷ ಮೊಣ್ಣಪ್ಪ ಕಾಮಗಾರಿ ಪರಿಶೀಲಿಸಿ ಗುತ್ತಿಗೆದಾರರಿಗೆ ಹಣ ಬಿಡುಗಡೆಗೊಳಿಸಬೇಕು ಹಾಗೂ ಗುಣಮಟ್ಟದ ಮರು ಮರುಡಾಮರೀಕರಣ ಆಗಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಹಾಗೂ ಎಸ್‍ಸಿ-ಎಸ್‍ಟಿ ಅನುದಾನದಲ್ಲಿ ಬಲಮುರಿಯಿಂದ ಹೊದ್ದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 1ಕಿ.ಮೀ. ಅಂತರವನ್ನು ಮರು ಡಾಮರೀಕರಣ ಹಾಗೂ 60ಮೀ. ಸಿಮೆಂಟ್ ರಸ್ತೆ ಕಾಮಗಾರಿಯನ್ನು ಕಳೆದ ಮೇ ತಿಂಗಳಿನಲ್ಲಿ ನಡೆಸಲಾಗಿತ್ತು. ಮರು ಡಾಮರೀಕರಣ ಹಾಗೂ ಸಿಮೆಂಟ್ ರಸ್ತೆ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಸಿದ್ದು, ಕೇವಲ ಮೂರು ತಿಂಗಳಲ್ಲಿ ಮರು ಡಾಮರೀಕರಣಗೊಂಡ ರಸ್ತೆ ಗುಂಡಿಗಳಾಗಿ ಪರಿವರ್ತನೆಗೊಂಡಿದೆ. ಸಿಮೆಂಟ್ ರಸ್ತೆಯ ಮೇಲ್ಪದರದಲ್ಲಿ ಗುಂಡಿ ಬೀಳುತ್ತಿದೆಯೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೂರ್ನಾಡು ಬಲಮುರಿ ರಸ್ತೆ ಮಳೆಗಾಲದಲ್ಲಿ ಹೊಳೆತೋಡು ಬಳಿ ನೀರು ತುಂಬಿಕೊಂಡು ಸಂಪರ್ಕ ಕಡಿತಗೊಳ್ಳುವುದರಿಂದ ಬಲಮುರಿ, ಪಾರಾಣೆ ಸಾಗಲು ಉಪಯುಕ್ತವಾಗುವ ರಸ್ತೆ ಇದೀಗ ಹದಗೆಟ್ಟಿದೆ.