ಮಡಿಕೇರಿ: ವಿಷಮಿಶ್ರಿತ ಹಲಸಿನ ಬೀಜ ತಿಂದು ಐದು ಹಸುಗಳು ಸಾವು; ದೂರು ದಾಖಲು
Update: 2018-07-17 23:37 IST
ಮಡಿಕೇರಿ, ಜು.17: ವಿಷ ಮಿಶ್ರಿತ ಹಲಸಿನ ಬೀಜ ತಿಂದು ಒಂದೇ ಮನೆಯ ಐದು ಹಸುಗಳು ಸಾವನ್ನಪ್ಪಿರುವ ಘಟನೆ ಕೂಡಿಗೆ ಪಂಚಾಯತ್ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರವಿ ಎಂಬುವವರಿಗೆ ಸೇರಿದ ಒಂದು ಎತ್ತು ಹಾಗೂ ನಾಲ್ಕು ಹಸುಗಳು ಸಮೀಪದ ಮೀಸಲು ಅರಣ್ಯದಲ್ಲಿ ಮೇಯಲು ಹೋಗಿದ್ದ ಸಂದರ್ಭ ಮೃತಪಟ್ಟಿವೆ. ಯಾರೋ ಕಿಡಿಗೇಡಿಗಳು ಪಕ್ಕದ ಜಮೀನಿಗೆ ಕಾಡಾನೆಗಳು ಬರುತ್ತಿದ್ದ ಕಾರಣ ಹಲಸಿನ ಹಣ್ಣಿನ ಬೀಜದಲ್ಲಿ ವಿಷ ಔಷಧಿಯನ್ನು ಬೇರೆಸಿ ದಾರಿಯ ಪಕ್ಕದಲ್ಲಿರುವ ಮರದ ಹತ್ತಿರ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಈ ಹಲಸಿನ ಬೀಜಗಳನ್ನು ಸೇವಿಸಿ ಹಸುಗಳು ಸಾವನ್ನಪ್ಪಿರುವುದಾಗಿ ಗ್ರಾಮಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಡ ಕುಟುಂಬದ ರವಿ ಅವರು ಜಾನುವಾರುಗಳ ಸಾಕಾಣಿಕೆಯಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಇದೀಗ ನಡೆದಿರುವ ಘಟನೆಯಿಂದ ಕುಟುಂಬ ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿದೆ.