​ಮಡಿಕೇರಿ: 400 ಕೋ.ರೂ. ವಿಶೇಷ ಪ್ಯಾಕೇಜ್ ನೀಡಲು ಅಹಿಂದ ಒಕ್ಕೂಟ ಆಗ್ರಹ

Update: 2018-07-17 18:09 GMT

ಮಡಿಕೇರಿ, ಜು.17 : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದಾಗಿ ಬಹುತೇಕ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಇವುಗಳ ಅಭಿವೃದ್ಧಿಗೆ ಕನಿಷ್ಠ 400 ಕೋಟಿ ರೂ.ಯ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಒಕ್ಕೂಟದ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಎಂ. ಮುದ್ದಯ್ಯ, ಜು.19ರಂದು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಸಂಬಂಧವಾಗಿ ಮನವಿ ಸಲ್ಲಿಸುವುದರೊಂದಿಗೆ ಕೊಡಗಿನ ಸಮಸ್ಯೆಗಳ ಕುರಿತು ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತೊಂದರೆ ಅನುಭವಿಸುತ್ತಿರುವ ಜನರ ಸಮಸ್ಯೆಗಳಿಗೆ ಸರಕಾರ ಶೀಘ್ರವಾಗಿ ಸ್ಪಂದಿಸಬೇಕು. ಮುಂದಿನ ವರ್ಷದ ಕಾಫಿ, ಕರಿಮೆಣಸು ಬೆಳೆಗಳು ಕೊಳೆರೋಗಕ್ಕೆ ತುತ್ತಾಗಿ ಶೇ.50ರಷ್ಟು ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲೆಗೆ ಹೊರದೇಶಗಳಿಂದ ಕರಿಮೆಣಸು ಆಮದಾಗುತ್ತಿರುವುದರಿಂದ 600 ರೂ. ಗಳಷ್ಟಿದ್ದ ಕರಿಮೆಣಸಿದ ಬೆಲೆ ಇದೀಗ 250 ರೂ.ಗೆ ಇಳಿದಿದೆ. ಇದರಿಂದಾಗಿ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ದಾಸ್ತಾನು ಇರಿಸಿದ್ದ ಕರಿಮೆಣಸನ್ನು ಕಡಿಮೆ ಬೆಲೆಯಿಂದಾಗಿ ಮಾರಲಾಗದ ಸ್ಥಿತಿಯಲ್ಲಿ ಬೆಳೆಗಾರರಿದ್ದು, ತೋಟದ ಕೆಲಸಕ್ಕೆ ಕೈಯ್ಯಲ್ಲಿದ್ದ ಹಣವೆಲ್ಲಾ ಖರ್ಚಾಗಿ ಇದೀಗ ಕಾರ್ಮಿಕರಿಗೂ ಕೆಲಸ ನೀಡಲಾಗದೆ ಬೆಳೆಗಾರರು ಹಾಗೂ ದುಡಿಯುವ ವರ್ಗಗಳೂ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಬಂಧ ಕ್ಷೇತ್ರದ ಸಂಸದರು ಕೇಂದ್ರ ವಾಣಿಜ್ಯ ಸಚಿವರ ಗಮನಸೆಳೆದು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಕೊಡಗಿನ ಜಮ್ಮಾ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಇನ್ನೂ ಬಗೆಹರಿಯದೆ ಉಳಿದಿದ್ದು, ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ.50ರಷ್ಟು ಅಹಿಂದವರೇ ಇದ್ದಾರೆ. ಸರಕಾರಿ ಕಚೇರಿಗಳಲ್ಲಿ ಈ ಬಡಜನರ ಕೆಲಸ ಕಾರ್ಯಗಳು ಶೀಘ್ರವಾಗಿ ಇತ್ಯರ್ಥವಾಗುತ್ತಿಲ್ಲ. ಜಿಲ್ಲೆ ಯಲ್ಲಿ ಕಾಡಾನೆ ಹಾಗೂ ಹುಲಿ ಹಾವಳಿ ಅಧಿಕವಾಗಿದ್ದು, ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವುಗಳ ಉಪಟಳವನ್ನು ನಿಯಂತ್ರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುದ್ದಯ್ಯ ಒತ್ತಾಯಿಸಿ ದರು.

ಜಿಲ್ಲೆಯಲ್ಲಿ ನೆರೆ ಹಾವಳಿಯಿಂದಾಗಿ ಈಗಾಗಲೇ ಭತ್ತದ ಕೃಷಿ ಕೊಳೆತು ಹೋಗಿದ್ದು, ಹಲವಾರ ರೈತರು ತೊಂದರೆಗೆ ಈಡಾಗಿದ್ದಾರೆ. ಇವರಿಗೆ ಕನಿಷ್ಠ ಎಕರೆಗೆ 5 ಸಾವಿರ ರೂ.ಗಳಂತೆ ಪರಿಹಾರ ನೀಡಬೇಕು. ರೈತರು, ಬೆಳೆಗಾರರು ಎಷ್ಟೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ, ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಸಕಾಲದಲ್ಲಿ ಪ್ರಾಮಾಣಿಕವಾಗಿ ಮರುಪಾವತಿಸುತ್ತಿದ್ದಾರೆ. ಆದರೆ ಸರಕಾರ ಈಗ ಘೋಷಿಸಿರುವ ಸಾಲ ಮನ್ನಾದಿಂದ ಕೊಡಗಿನ ಕೇವಲ 168 ಮಂದಿಗೆ ಮಾತ್ರ ಪ್ರಯೋಜನವಾಗಲಿದ್ದು, ಪ್ರಾಮಾಣಿಕವಾಗಿ ಸಾಲ ಮರು ಪಾವತಿಸಿದ ಸುಮಾರು 35-40 ಸಾವಿರ ಮಂದಿ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಲ ಮನ್ನಾ ಯೋಜನೆ ಎಲ್ಲಾ ರೈತರಿಗೂ ಸಿಗುವಂತೆ ಮಾಡಬೇಕು ಎಂದು ಮುದ್ದಯ್ಯ ಒತ್ತಾಯಿಸಿದರು.

ಒಕ್ಕೂಟದ ಗೌರವಾಧ್ಯಕ್ಷ ಬಿ.ಎ.ಸಂಶುದ್ದೀನ್, ಕೊಡಗು ಪುಟ್ಟ ಜಿಲ್ಲೆ ಎಂಬ ಕಾರಣಕ್ಕೆ ಬಹುತೇಕ ಎಲ್ಲಾ ಸರಕಾರಗಳೂ ಕೊಡಗನ್ನು ನಿರ್ಲಕ್ಷಿಸುತ್ತಲೇ ಬಂದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಕಾರ್ಯದರ್ಶಿ ಎಂ. ಅಬ್ದುಲ್ಲಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News