×
Ad

ಮಳೆ ಬಿಡುವು: ಹಲವು ದಿನಗಳ ನಂತರ ಬಿಸಿಲು ಕಂಡ ಕೊಡಗು

Update: 2018-07-17 23:42 IST

ಮಡಿಕೇರಿ, ಜು.17: ಕಳೆದ ಎರಡು ವಾರಗಳಿಂದ ಭಾರೀ ಗಾಳಿ, ಮಳೆಯಿಂದ ತತ್ತರಿಸಿ ಹೋಗಿದ್ದ ಕೊಡಗು ಜಿಲ್ಲೆ ಇಂದು ಕೊಂಚ ಬಿಸಿಲಿನ ವಾತಾವರಣದಿಂದ ಹರ್ಷಗೊಂಡಿತು. 

ರಾತ್ರಿಯಿಂದ ಬೆಳಗ್ಗೆ 10 ಗಂಟೆಯವರೆಗೆ ಗಾಳಿ ಸಹಿತ ಧಾರಾಕಾರ ಮಳೆಯಾದ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ವಾತಾವರಣ ಕಂಡು ಬಂದು ಜನ ಖುಷಿಯಾದರು. ನಿತ್ಯ ಮಳೆಯ ನೀರಿನಿಂದ ತುಂಬಿ ಹರಿಯುತ್ತಿದ್ದ ರಸ್ತೆಗಳು ಸೂರ್ಯನ ಬೆಳಕಿಗೆ ಮೈಯೊಡ್ಡಿ ಸ್ವಚ್ಛಂದ ಸಂಚಾರಕ್ಕೆ ಅವಕಾಶ ಕಲ್ಪಿಸಿದವು. ಮಹಾಮಳೆಯಿಂದ ಹಾನಿಗೊಳಗಾಗಿದ್ದ ಮನೆಗಳು, ವಿದ್ಯುತ್ ಕಂಬಗಳನ್ನು ದುರಸ್ತಿ ಪಡಿಸಲು ಮಳೆ ಸಾಕಷ್ಟು ಬಿಡುವು ನೀಡಿದ ಕಾರಣ ದುರಸ್ತಿ ಕಾರ್ಯ ಎಲ್ಲೆಡೆ ಬಿರುಸುಗೊಂಡಿತ್ತು. ಚೆಸ್ಕಾಂ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾದರು. ಗ್ರಾಮೀಣ ಪ್ರದೇಶಗಳಲ್ಲಿ ಬಿದ್ದಿದ್ದ ಮರಗಳ ತೆರವು ಕಾರ್ಯಾಚರಣೆಯೂ ನಡೆಯಿತು.

ಭಾಗಮಂಡಲ ಹಾಗೂ ತಲಕಾವೇರಿಯಲ್ಲೂ ಮಳೆಯ ಪ್ರಮಾಣ ಕ್ಷೀಣಿಸಿತ್ತು. ಜು.20 ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಕಾರಣ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸ್ಥಳಕ್ಕೆ ಭೇಟಿ ನೀಡಿ ಪೂರ್ವಭಾವಿ ತಯಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಒಟ್ಟಿನಲ್ಲಿ ಕಳೆದ ಎರಡು ವಾರಗಳ ಕಾಲ ಸುರಿದ ಮಹಾಮಳೆ ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಮೂರೂ ತಾಲ್ಲೂಕುಗಳಿಲ್ಲಿಯೂ ಬಿಡುವು ನೀಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News