ಸದ್ಯದಲ್ಲಿಯೇ ಸಮ್ಮಿಶ್ರ ಸರ್ಕಾರ ಉರುಳಿ, ಬಿಜೆಪಿ ಅಧಿಕಾರಕ್ಕೆ ಬರಲಿದೆ: ಬಿ.ಎಸ್ ವಿಜಯೇಂದ್ರ

Update: 2018-07-18 17:06 GMT

ಗುಂಡ್ಲುಪೇಟೆ,ಜು.18: ಜನತೆಯ ಆಶೀರ್ವಾದವಿಲ್ಲದ ರಾಜ್ಯದ ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ವಿಜಯೇಂದ್ರ ಹೇಳಿದರು. 

ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂಜರೆದರೂ ಪಟ್ಟುಬಿಡದ ಯಡಿಯೂರಪ್ಪ ಗುಡುಗಿದ ಪರಿಣಾಮ ಸಾಲಮನ್ನಾ ಮಾಡಲಾಗಿದೆ. ಆದರೆ ಸರ್ಕಾರ ಯಾವ ಸಾಲ ಮನ್ನಾ ಮಾಡಲಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲದೆ ಗೊಂದಲವುಂಟಾಗಿದ್ದು ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲೂ ಸಾಧ್ಯವಾಗಿಲ್ಲ. ಹಿಂದಿನ ಸರ್ಕಾರ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದೆ. ಬಿಎಸ್‍ವೈ ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಜಾತಿ ವರ್ಗಗಳಿಗೆ ಸೀಮಿತವಾಗದೆ ಎಲ್ಲಾ ಯೋಜನೆಗಳಲ್ಲಿಯೂ ಸರ್ವರಿಗೂ ಸಮಪಾಲು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಮತ್ತೊಮ್ಮೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸುತ್ತಿದ್ದು ಸದ್ಯದಲ್ಲಿಯೇ ಸಮ್ಮಿಶ್ರ ಸರ್ಕಾರ ಉರುಳಿಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜನತೆಯ ಆಶೀರ್ವಾದ ಇಲ್ಲದಿದ್ದರೂ ಅಧಿಕಾರದ ವ್ಯಾಮೋಹದಿಂದ ಒಂದಾದ ಕಾಂಗ್ರೆಸ್ ಜಿಡಿಎಸ್ ಸರ್ಕಾರ ಸರ್ಕಾರ ಬೀಳಲಿದೆಯೋ ಎಂಬ ಭೀತಿಯಿಂದ ತೀವ್ರ ಗೊಂದಲಕ್ಕೆ ಸಿಲುಕಿರುವ ಕುಮಾರಸ್ವಾಮಿ ಕಣ್ಣೀರಿಡುತ್ತಾ ಅನುಕಂಪಗಿಟ್ಟಿಸಲು ಮುಂದಾಗಿದ್ದಾರೆ. ಕಳೆದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿದ್ರೆಮಾಡುತ್ತಾ ದುರಾಡಳಿತ ನಡೆಸಿದ ಪರಿಣಾಮವಾಗಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ಸಿಗರು ನಿಜವಾಗಿಯೂ ಕಣ್ಣೀರಿಡಬೇಕಾಗಿದೆ. ಕಳೆದ ಆರು ತಿಂಗಳಿನಿಂದ ಸಂಬಳ ದೊರಕದ ಬೆಂಗಳೂರಿನ ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ವಿವಿಧ ಇಲಾಖೆಗಳ ಅನುದಾನಗಳು ಬಳಕೆಯಾಗದೆ ಅಭಿವೃದ್ದಿ ಕುಂಠಿತವಾಗಿದೆ. ಉತ್ತಮ ಆಡಳಿತ ನೀಡಿದ್ದರೆ ಚಾಮುಂಡೇಶ್ವರಿಯಲ್ಲಿ ಯಾಕೆ ಸೋಲುತ್ತಿದ್ದರು. ಅದೃಷ್ಟವಶಾತ್ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅಸಹಾಯಕತೆಯಿಂದ ಸಾರ್ವಜನಿಕವಾಗಿ ಕಣ್ಣೀರುಡುತ್ತಿರುವುದರಿಂದ ಅಭದ್ರತೆಗೊಳಗಾಗಿದ್ದು, ಸರ್ಕಾರ ಯಾವಾಗ ಬೇಕಾದರೂ ಉರುಳಲಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಸಿಎಸ್.ನಿರಂಜನಕುಮಾರ್, ವಿಜಯೇಂದ್ರ, ಮೈಸೂರು ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅವರನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಯುವಮೊರ್ಚಾ ಅಧ್ಯಕ್ಷ ಪ್ರಣಯ್, ತಾಪಂ ಸದಸ್ಯರಾದ ರೇವಣ್ಣ, ಪ್ರಭಕರ್, ಮಾಜಿ ಸದಸ್ಯ ಮಹದೇವಪ್ರಸಾದ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನಿಲ್. ಮುಖಂದರಾದ ಕೆ.ಆರ್.ಲೋಕೇಶ್, ಮಲ್ಲೇಶ್, ಮಹೇಶ್, ಸಿದ್ದರಾಮಪ್ಪ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News