ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಕೂಲಿ ಕಾರ್ಮಿಕ ಮೃತ್ಯು

Update: 2018-07-18 17:09 GMT

ಶಿವಮೊಗ್ಗ, ಜು. 18: ವಿದ್ಯುತ್ ಕಂಬ ನಿಲ್ಲಿಸುವ ಕಾಮಗಾರಿ ನಡೆಸುವ ವೇಳೆ ಸಂಭವಿಸಿದ ಅವಘಡದಲ್ಲಿ ವಿದ್ಯುತ್ ಶಾಕ್‍ಗೆ ತುತ್ತಾಗಿ ಪಶ್ಚಿಮ ಬಂಗಾಳ ರಾಜ್ಯ ಮೂಲದ ಕೂಲಿ ಕಾರ್ಮಿಕನೋರ್ವ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದ ಬಳಿಯ ರೆಡ್ಡಿಕ್ಯಾಂಪ್ ಬಳಿ ನಡೆದಿದೆ. 

ಪಶ್ಚಿಮ ಬಂಗಾಳ ರಾಜ್ಯದ ಚಾಂದ್‍ಪರ್ ಮದೀಯಾ ಘಾಟ್ ನಿವಾಸಿ ಬೋಲಾ ಮಂಡಲ್ ಮೃತಪಟ್ಟ ಕೂಲಿಕಾರ್ಮಿಕ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ನಿವಾಸಿಗಳಾದ ಶೇಖರ್ ಮಂಡಲ್ ಹಾಗೂ ಸುಶಾಂತ್ ಘೋಷರವರು ಗಾಯಗೊಂಡಿದ್ದು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಪಶ್ಚಿಮ ಬಂಗಾಳದ ಸುಮಾರು 13 ಕೂಲಿಕಾರ್ಮಿಕರು ಶ್ರೀರಾಮುಲು ಎಲೆಕ್ಟ್ರಿಕಲ್ಸ್‍ನ ಪ್ರಕಾಶ್ ಕುರ್ತುಕೋಟಿ ಎಂಬುವರ ಬಳಿ ಕೆಲಸ ಮಾಡುತ್ತಿದ್ದರು. ನಿರಂತರ ಜ್ಯೋತಿ ಯೋಜನೆಯಡಿ ರೆಡ್ಡಿ ಕ್ಯಾಂಪ್ ಗ್ರಾಮದಲ್ಲಿ ಹೊಸದಾಗಿ ವಿದ್ಯುತ್ ಕಂಬ ಅಳವಡಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಕಂಬ ಪಕ್ಕದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ಲೈನ್ ಮೇಲೆ ಬಿದ್ದಿತ್ತು. ವಿದ್ಯುತ್ ಪ್ರವಹಿಸಿದ್ದರಿಂದ ಮೂವರು ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಬೋಲಾ ಮಂಡಲ್ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News