ಮುಂಗಾರು ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಹಾನಿ: 2 ತಿಂಗಳಲ್ಲಿ ಮೂವರು ಮೃತ್ಯು

Update: 2018-07-18 17:13 GMT

ಶಿವಮೊಗ್ಗ, ಜು. 18: ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಹೊಸ ನಿರೀಕ್ಷೆ ಮೂಡಿಸಿದೆ. ಬಹುತೇಕ ಜಿಲ್ಲೆಯಾದ್ಯಂತ ಉತ್ತಮ ವರ್ಷಧಾರೆಯಾಗುತ್ತಿದೆ. ಹಲವೆಡೆ ಬಿದ್ದ ಧಾರಾಕಾರ ಮಳೆಯಿಂದ ಭಾರೀ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾಗಿದೆ. ಜನ-ಜಾನುವಾರುಗಳ ಜೀವಹಾನಿಯಾಗಿದೆ. ಜೊತೆಗೆ ಅಪಾರ ಪ್ರಮಾಣದ ರಸ್ತೆ, ಸೇತುವೆ, ಕೃಷಿ ಭೂಮಿಗೆ ಹಾನಿಯಾಗಿದೆ.  

ಮಳೆಯಿಂದಾದ ಹಾನಿಯ ಕುರಿತಂತೆ, ಜಿಲ್ಲಾಡಳಿತ ಎಲ್ಲ ತಾಲೂಕು ಆಡಳಿತಗಳಿಂದ ವರದಿ ಮಾಹಿತಿ ಕಲೆ ಹಾಕುವ ಕಾರ್ಯ ನಡೆಸಲಾರಂಭಿಸಿದೆ. ಪ್ರಸ್ತುತ ಜಿಲ್ಲಾಡಳಿತ ಸಂಗ್ರಹಿಸಿರುವ ಪ್ರಾಥಮಿಕ ಹಂತದ ಮಾಹಿತಿಯ ಅನುಸಾರ, ಭಾರೀ ಪ್ರಮಾಣದ ನಷ್ಟ ಸಂಭವಿಸಿರುವುದು ಕಂಡುಬರುತ್ತದೆ. ಹಾಗೆಯೇ ಸಂತ್ರಸ್ತರಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿ (ಸಿಆರ್‍ಎಫ್) ಯಿಂದ, ಸಕಾಲದಲ್ಲಿ ಪರಿಹಾರ ತಲುಪಿಸುವ ಕಾರ್ಯವನ್ನು ಕೂಡ ತಾಲೂಕು ಆಡಳಿತಗಳು ನಡೆಸಿವೆ.

ಜಿಲ್ಲಾಡಳಿತದ ಮೂಲಗಳು ನೀಡುವ ಮಾಹಿತಿ ಅನುಸಾರ, ಕಳೆದ ಏಪ್ರಿಲ್ ತಿಂಗಳನಿಂದ ಜುಲೈ 17 ರವರೆಗೆ ಜಿಲ್ಲೆಯಲ್ಲಿ ಮಳೆಯಿಂದ 260 ಮನೆಗಳಿಗೆ ಹಾನಿಯಾಗಿದೆ. ನಾಲ್ಕು ಜನರು, 30 ಜಾನುವಾರುಗಳು ಮೃತಪಟ್ಟಿವೆ. 44 ಲಕ್ಷ ರೂ. ಮೊತ್ತದ ಪಿಡಬ್ಲ್ಯೂಡಿಗೆ ಸೇರಿದ ಗ್ರಾಮೀಣ ಭಾಗದ ರಸ್ತೆಗೆ ಹಾನಿಯಾಗಿದೆ. ಉಳಿದಂತೆ ರಸ್ತೆ, ಸೇತುವೆ, ಕೃಷಿ-ತೋಟಗಾರಿಕೆ ಭೂಮಿಗಾದ ಹಾನಿಯ ಕುರಿತಂತೆ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಇನ್ನಷ್ಟೆ ವರದಿಗಳು ಲಭ್ಯವಾಗಬೇಕಾಗಿದೆ. 

ಹಾನಿಯ ವಿವರ: ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ಒಟ್ಟಾರೆ 260 ಮನೆಗಳಿಗೆ ಹಾನಿಯಾಗಿದ್ದು, 22,62,600 ರೂ. ಮೊತ್ತದ ಪರಿಹಾರ ವಿತರಣೆ ಮಾಡಲಾಗಿದೆ. ಸೊರಬ ತಾಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮನೆಗಳಿಗೆ ಹಾನಿಯಾಗಿದ್ದು, 104 ಮನೆಗಳಿಗೆ ಧಕ್ಕೆಯಾಗಿದೆ. 3,66,800 ರೂ. ಪರಿಹಾರ ಮೊತ್ತ ವಿತರಿಸಲಾಗಿದೆ. 

ಅದೇ ರೀತಿ ಶಿವಮೊಗ್ಗದಲ್ಲಿ 12 ಮನೆ ಹಾನಿಗೀಡಾಗಿದ್ದು, 54,400 ರೂ. ಪರಿಹಾರ ಮೊತ್ತ ನೀಡಲಾಗಿದೆ. ಭದ್ರಾವತಿ 42 ಮನೆ - 2,35,200 ರೂ. ಪರಿಹಾರ, ತೀರ್ಥಹಳ್ಳಿಯಲ್ಲಿ 7 ಮನೆ - 58,800 ರೂ. ಪರಿಹಾರ, ಸಾಗರದಲ್ಲಿ 53 ಮನೆ - 4,96,000 ರೂ. ಪರಿಹಾರ, ಶಿಕಾರಿಪುರದಲ್ಲಿ 12 ಮನೆ - 38,400 ರೂ. ಪರಿಹಾರ ಹಾಗೂ ಹೊಸನಗರ ತಾಲೂಕಿನಲ್ಲಿ 22 ಮನೆಗಳಿಗೆ ಹಾನಿಯಾಗಿದ್ದು, 10,13,000 ರೂ. ಪರಿಹಾರ ಮೊತ್ತ ವಿತರಿಸಲಾಗಿದೆ. 

ಜೀವ ಹಾನಿ: ಬೇಸಿಗೆಯ ಏಪ್ರಿಲ್ ಹಾಗೂ ಮೇ ತಿಂಗಳು ಹೊರತುಪಡಿಸಿ, ಕಳೆದೆರೆಡು ತಿಂಗಳ ಅವಧಿಯಲ್ಲಿ ಇಲ್ಲಿಯವರೆಗೂ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ಪಟ್ಟಣದಲ್ಲಿ ಮೂವರು ಮಳೆ ಕಾರಣದಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 14 ಲಕ್ಷ ರೂ. ಪರಿಹಾರ ಮೊತ್ತ ವಿತರಿಸಲಾಗಿದೆ. ತೀರ್ಥಹಳ್ಳಿ, ಸಾಗರ ಪ್ರಕರಣದಲ್ಲಿ ತಲಾ 5 ಲಕ್ಷ ರೂ. ಹಾಗೂ ಹೊಸನಗರ ಪ್ರಕರಣದಲ್ಲಿ 4 ಲಕ್ಷ ರೂ. ಪರಿಹಾರ ಮೊತ್ತವನ್ನು ಮೃತರ ಕುಟುಂಬಗಳಿಗೆ ಜಿಲ್ಲಾಡಳಿತ ವಿತರಿಸಿದೆ. 

ಒಟ್ಟಾರೆ 30 ಜಾನುವಾರುಗಳು ಮೃತಪಟ್ಟಿದ್ದು, 4,19,000 ರೂ. ಪರಿಹಾರ ನೀಡಲಾಗಿದೆ. ಶಿವಮೊಗ್ಗದಲ್ಲಿ 13 ಜಾನುವಾರು ಮೃತಪಟ್ಟಿದ್ದು, 39 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. ಅದೇ ರೀತಿ ಭದ್ರಾವತಿಯಲ್ಲಿ 0-0, ತೀರ್ಥಹಳ್ಳಿಯಲ್ಲಿ 8 - 2.10 ಲಕ್ಷ ರೂ., ಸಾಗರದಲ್ಲಿ 2-30 ಸಾವಿರ ರೂ., 3 - 65 ಸಾವಿರ ರೂ., ಹೊಸನಗರದಲ್ಲಿ 4 ಜಾನುವಾರುಗಳು ಮೃತಪಟ್ಟಿದ್ದು, 75 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. 

ರಸ್ತೆಗೆ ಹಾನಿ: ಪಿಡಬ್ಲ್ಯೂಡಿ ಇಲಾಖೆ ವ್ಯಾಪ್ತಿಗೆ ಸೇರಿದ 44 ಲಕ್ಷ ರೂ. ಮೊತ್ತದ ರಸ್ತೆಗಳಿಗೆ ಹಾನಿಯಾಗಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ ರಸ್ತೆಗಳಿಗೆ ಧಕ್ಕೆಯಾದ ವಿವರ ಕಲೆಹಾಕುವ ಕಾರ್ಯವನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಡೆಸುತ್ತಿದ್ದಾರೆ. ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಾಗಿದೆ. 

ನಿಯಮಾನುಸಾರ ಪರಿಹಾರ ವಿತರಣೆ: ಅಪರ ಜಿಲ್ಲಾಧಿಕಾರ ಕೆ. ಚೆನ್ನಬಸಪ್ಪ 
'ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟ ಪ್ರಕರಣಗಳಲ್ಲಿ, ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ತ್ವರಿತಗತಿಯಲ್ಲಿ ಹಾಗೂ ನಿಯಮಾನುಸಾರ ಜಿಲ್ಲಾಡಳಿತದಿಂದ ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಮನೆಗೆ ಧಕ್ಕೆ ಹಾಗೂ ಜಾನುವಾರು ಮೃತಪಟ್ಟ ಪ್ರಕರಣಗಳಲ್ಲಿಯೂ ಸಂಬಂಧಿಸಿದವರಿಗೆ ಪರಿಹಾರದ ಮೊತ್ತ ತಲುಪಿಸಲಾಗಿದೆ. ಮಳೆಯಿಂದಾದ ಹಾನಿಯ ವಿವರ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಇಷ್ಟರಲ್ಲಿಯೇ ಒಟ್ಠಾರೆ ನಷ್ಟದ ಪ್ರಮಾಣ ತಿಳಿದುಬರಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪರವರು ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. 

ಭದ್ರಾ ನದಿ ಪಾತ್ರದ ನಾಗರಿಕರಿಗೆ ಎಚ್ಚರಿಕೆ 
ಮುಂಗಾರು ಹಂಗಾಮಿನಲ್ಲಿ ಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯದ ಮಟ್ಟವು ತ್ವರಿತಗತಿಯಲ್ಲಿ ಏರಿಕೆಯಾಗುತ್ತಿರುತ್ತದೆ. ಜಲಾಶಯದ ಪ್ರವಾಹ ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಯಾವುದೇ ಸಮಯದಲ್ಲಾದರೂ ಜಲಾಶಯದಿಂದ ನೀರನ್ನು ನದಿ ಪಾತ್ರಕ್ಕೆ ಹರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು, ತೋಟಗಾರಿಕೆ ಮಾಡುವುದು ಮತ್ತು ಪಂಪ್‍ಸೆಟ್‍ಗಳಿಂದ ನೀರೆತ್ತುವುದನ್ನೂ ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News