ಸಮಾಜದಲ್ಲಿ ಉತ್ತಮ ಮನುಷ್ಯರಾಗಿ ಮುನ್ನಡೆಯಬೇಕು: ಮಾಜಿ ಸಚಿವ ಎಂ.ಎಸ್.ಆತ್ಮಾನಂದ

Update: 2018-07-18 17:32 GMT

ಮಂಡ್ಯ,ಜು.18: ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಮದ್ಯ ತ್ಯಜಿಸಿ, ಹೊಸ ಜೀವನಕ್ಕೆ ಕಾಲಿಡುತ್ತಿರುವ ಶಿಬಿರಾರ್ಥಿಗಳು ಮುಂದಿನ ಜೀವನವನ್ನು ಸಂತಸದಿಂದ ಕಳೆಯುವಂತೆ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿಯ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ, ಜಿಲ್ಲಾ ಜನಜಾಗೃತಿ ವೇದಿಕೆ, ಇತರ ಸಂಘಸಂಸ್ಥೆಗಳ ವತಿಯಿಂದ ತಾಲೂಕಿನ ಜಿ.ಕೆಬ್ಬಹಳ್ಳಿಯ ಶ್ರೀ ಕಾಲಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 8 ದಿನಗಳ 1223ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಂತರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನಹಳ್ಳಿ ಮಾತನಾಡಿ, ಕಳೆದ 7 ದಿನಗಳಿಂದ ಶಿಬಿರದಲ್ಲಿ ಪಾಲ್ಗೊಂಡಿರುವ ಶಿಬಿರಾರ್ಥಿಗಳಲ್ಲಿ ಹೊಸ ಚೈತನ್ಯ ಕಂಡು ಬಂದಿದೆ. ಮುಂದೆಯೂ ದುಶ್ಚಟಗಳಿಂದ ದೂರವಿದ್ದು, ಸಂತಸದಿಂದ ಜೀವನ ನಡೆಸುವಂತೆ ತಿಳಿಸಿದರು. ಶಿಬಿರದಲ್ಲಿ ಕುಡಿತ ಬಿಡಿಸಲು ಯಾವ ಔಷಧಿ ನೀಡಲಿಲ್ಲ. ಮಾನಸಿಕ ಚಿಕಿತ್ಸೆ ನೀಡಿ, ದೈರ್ಯ ತುಂಬಲಾಯಿತು. ಯಾರೂ ಒಳ್ಳೆಯವರಾಗಿ ಎಂದು ಹೇಳುವುದಿಲ್ಲ. ಆದರೆ, ಸಮಾಜದಲ್ಲಿ ದಾರಿ ತಪ್ಪಿರುವವರನ್ನು ಸರಿದಾರಿಗೆ ತರಲು ವೀರೇಂದ್ರ ಹೆಗಡೆಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ತಾಪಂ ಸದಸ್ಯ ಬಿ.ಎಲ್.ಬೋರೇಗೌಡ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಮನ್‍ಮುಲ್ ನಿರ್ದೇಶಕ ಬಿ.ಚಂದ್ರು, ಸದಾನಂದ ಬಂಗೇರ, ಮಂಜುಳಾ ಆನಂದ್, ವಿವೇಕ್ ವಿನ್ಸೆಂಟ್ ಪಾಯಸ್, ವಿನಯ್‍ಕುಮಾರ್, ನಾಗರಾಜು, ಎಂ.ಡಿ.ಜವರಪ್ಪ, ಈರೇಗೌಡ, ಸವಿತಾ, ಪ್ರಸನ್ನ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News