ಐಫೋನ್ ವಿತರಣೆಗೂ ಸರಕಾರಕ್ಕೂ ಸಂಬಂಧವಿಲ್ಲ: ಶಾಸಕ ಕೆ.ಸುರೇಶ್‍ಗೌಡ

Update: 2018-07-18 17:43 GMT

ಮಂಡ್ಯ, ಜು.18: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಂಸದರಿಗೆ ಐಫೋನ್ ನೀಡಿರುವುದು ಅದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಕೆ.ಸುರೇಶ್‍ಗೌಡ ಹೇಳಿದರು.

ಬುಧವಾರ ಮದ್ದೂರು ತಾಲೂಕಿನ ಕೊಪ್ಪ ಕೆರೆಗೆ ಭಾಗಿನ ಅರ್ಪಿಸಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದಾರೆ. ಇದಕ್ಕೆ ಕಾಲಾವಾಕಾಶ ಬೇಕಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಮುಂದುವರೆಸಿಕೊಂಡು, ಹೊಸದಾಗಿ ಜನಪರ ಯೋಜನೆಗಳನ್ನುಜಾರಿಗೆ ತಂದು, ರೈತರ ಸಾಲಮನ್ನಾ ಮಾಡಿರುವುದು ಸುಲಭದ ವಿಷಯವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಜಿಲ್ಲೆಯ ರೈತರಿಗೆ 3,900 ಕೋಟಿ ರೂ. ಸಾಲಮನ್ನಾ ಪ್ರಯೋಜನ ದೊರೆತಿದೆ. ಇಷ್ಟೊಂದು ದೊಡ್ಡ ಮೊತ್ತದ ಸಾಲಮನ್ನಾ ಒಂದು ಸಾಧನೆ ಎಂದರು. ಕೊಪ್ಪ ಕೆರೆಯನ್ನು ಪ್ರವಾಸಿತಾಣ ಮಾಡಲು ಪ್ರವಾಸೋದ್ಯಮ ಹಾಗೂ ನೀರಾವರಿ ಸಚಿವರ ಜತೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಕೆರೆಯ ಬಳಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಜಿಪಂ ಸದಸ್ಯರಾದ ರೇಣುಕಮ್ಮ, ಮರಿಹೆಗ್ಗಡೆ, ತಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಸದಸ್ಯ ಮೋಹನ್, ಮುಖಂಡರಾದ ಆಬಲವಾಡಿ ಸುರೇಶ್, ರಾಮಚಂದ್ರು,  ಚಿಕ್ಕೊನಹಳ್ಳಿ ತಮ್ಮಯ್ಯ, ತಮ್ಮಣ್ಣನಾಯಕ್, ರಾಮಕೃಷ್ಣ, ಗಿರೀಶ್, ಕುಶ, ಮಧು ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News