ಚಿಕ್ಕಮಗಳೂರು: ಮಳೆ ಅವಾಂತರ; ಹದಗೆಟ್ಟ ರಸ್ತೆಯ ಕೆಸರಿನಲ್ಲಿ ಸಿಲುಕಿದ ಬಸ್

Update: 2018-07-18 17:54 GMT

ಚಿಕ್ಕಮಗಳೂರು, ಜು.18: ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ ಹದಗೆಟ್ಟು ಕೆಸರು ಗುಂಡಿಯಂತಾಗಿದ್ದ ಡಾಂಬರು ರಸ್ತೆಯ ಗುಂಡಿಯೊಂದರಲ್ಲಿ ಕೆಎಸ್ಸಾರ್ಟಿಸಿ ಬಸ್ಸೊಂದು ಸಿಲುಕಿದ ಪರಿಣಾಮ ಬಸ್ ಮುಂದಾಕ್ಕೆ ಹೋಗಲಾಗದೇ ಸ್ಥಳೀಯ ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡಿದ ಘಟನೆ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ ಈ ಮಾರ್ಗದಲ್ಲಿ ಗ್ರಾಮೀಣ ಪ್ರದೇಶದ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊತ್ತು ಮೂಡಿಗೆರೆಯತ್ತ ಬರುತ್ತಿದ್ದ ಕೆಎಸ್ಸಾಟಿಸಿ ಬಸ್ ಬೈದುವಳ್ಳಿ ಗ್ರಾಮದ ಸಮೀಪದ ರಸ್ತೆ ಮಧ್ಯೆ ಇದ್ದ ಭಾರೀ ಗಾತ್ರದ ಕೆಸರು ಗುಂಡಿಗೆ ಸಿಲುಕಿಕೊಂಡಿದೆ. ಬಸ್‍ನ ಒಂದು ಟೈರ್ ಗುಂಡಿಯೊಳಗೆ ಸಂಪೂರ್ಣವಾಗಿ ಹೂತು ಹೋದ ಪರಿಣಾಮ ಬಸ್ ಚಾಲಕ ಎಷ್ಟೇ ಹರಸಾಹಸಪಟ್ಟರೂ ಬಸ್ ಮಾತ್ರ ಅಲ್ಲಾಡಲಿಲ್ಲ. ರಸ್ತೆಯಲ್ಲಿ ಭಾರೀ ಕೆಸರಿದ್ದ ಕಾರಣ ಬಸ್ ಪ್ರಯಾಣಿಕರು ಕೆಳಗಿಳಿದು ಬಸ್ ತಳ್ಳಲು ಸಾಧ್ಯವಾಗಲಿಲ್ಲ.

ಇದರಿಂದಾಗಿ ಬಸ್‍ನಲ್ಲಿದ್ದ ಕಾರ್ಮಿಕರು, ನೌಕರರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕೆಲಸಕ್ಕೆ, ಶಾಲೆ, ಕಾಲೇಜುಗಳಿಗೆ ಹೋಗಲು ಸಾಧ್ಯವಾಗದೇ ರಸ್ತೆ ಪರಿಸ್ಥಿತಿಗೆ ಕಾರಣವಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಸುಮಾರು 1 ಗಂಟೆ ಚಾಲಕ ಏನೇ ಕಸರತ್ತು ಮಾಡಿದರೂ ಬಸ್ ಮೇಲೇಳದ ಕಾರಣ ಲಾರಿಯೊಂದರ ಸಹಾಯದಿಂದ ಬಸ್‍ಅನ್ನು ಮೇಲಕ್ಕೆ ಎತ್ತ ಬೇಕಾಯಿತು.

ಬಸ್ ಮೇಲಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಯಿತು. ನಂತರ ಸ್ಥಳೀಯರು ಗುಂಡಿಬಿದ್ದದ್ದ ರಸ್ತೆಯ ಮಧ್ಯೆ ಇತರ ವಾಹನ ಚಾಲಕರಿಗೆ ಎಚ್ಚರಿಕೆ ನೀಡುವ ಸಲುವಾಗಿ ಬಾಳೆಗಿಡವೊಂದನ್ನು ನೆಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News