ಚಿಕ್ಕಮಗಳೂರು: ತಣ್ಣಗಾದ ಮಳೆ ಅರ್ಭಟ; ಶಾಂತವಾದ ತುಂಗಾ, ಭದ್ರಾ ನದಿಗಳು

Update: 2018-07-18 18:05 GMT

ಚಿಕ್ಕಮಗಳೂರು, ಜು.18: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ತಿಂಗಳಿನಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಸದ್ಯ ಬಿಡುವು ನೀಡಿದ್ದು, ಬುಧವಾರ ಬೆಳಗ್ಗೆಯಿಂದಲೇ ಮಲೆನಾಡಿನಾದ್ಯಂತ ಮಳೆ, ಗಾಳಿಯ ಆರ್ಭಟ ಇಳಿಮುಖವಾಗಿದೆ. ಕಳೆದ ಮೂರು ದಿನಗಳಿಂದ ಮಲೆನಾಡಿನಲ್ಲಿ ಗಾಳಿಯೊಂದಿಗೆ ಸಾಧಾರಣ ಮಳೆಯಾಗುತ್ತಿದ್ದು, ಭಾರೀ ಮಳೆಗೆ ರೋಸಿಹೋಗಿದ್ದ ಮಲೆನಾಡಿನ ಜನತೆ ಕೊಂಚ ನಿರಾಳರಾಗಿದ್ದಾರೆ.

ಜಿಲ್ಲೆಯ ಮಲೆನಾಡು ಹಾಗೂ ಬಯಲುಸೀಮೆ ತಾಲೂಕುಗಳ ವ್ಯಾಪ್ತಿಯಲ್ಲಿ ಬುಧವಾರ ಮಳೆ ಇಳಿಮುಖವಾಗಿದ್ದು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್ ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಆಗಾಗ್ಗೆ ಭಾರೀ ಮಳೆಯಾಗಿದ್ದು, ಮೂಡಿಗೆರೆ ತಾಲೂಕಿನ ಕಳಸ, ಕುದುರೆಮುಖ, ಹೊರನಾಡು, ಸಂಸೆ ಮತ್ತಿತರ ಕಡೆಗಳಲ್ಲಿ ಭಾರೀ ಮಳೆ ಸುರಿದಿದೆ. ಬುಧವಾರವೂ ಮುಂಜಾನೆಯೂ ಕೆಲವೆಡೆ ಮಳೆ ಸುರಿದಿದೆ. ಆದರೆ ಬೆಳಗ್ಗೆ 10ರಿಂದ ಸಂಜೆ 5ರವರೆಗೂ ಈ ತಾಲೂಕುಗಳ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದ್ದೂ, ಭಾರೀ ಮಳೆಯಾದ ಬಗ್ಗೆ ವರದಿಯಾಗಿಲ್ಲ. 

ಮಳೆ ಬಿಡುವು ನೀಡಿದ ಪರಿಣಾಮ ಮಲೆನಾಡಿನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ತುಂಗಾ, ಭದ್ರಾ, ಹೇಮಾವತಿ ನದಿಗಳು ಶಾಂತಗೊಂಡಿದ್ದು, ಅಸ್ತವ್ಯಸ್ತಗೊಂಡಿದ್ದ ಮಲೆನಡಿನ ಜನಜೀವನಸ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇನ್ನು ಮಳೆ ಬಿಡುವು ನೀಡುತ್ತಿದ್ದಂತೆ ಮಲೆನಾಡಿನಾದ್ಯಂತ ನೆನೆಗುದಿಗೆ ಬಿದ್ದಿದ್ದ ಕಾಫಿ, ಅಡಿಕೆ ತೋಟಗಳು ಹಾಗೂ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿವೆ.

ಮಂಗಳವಾರ ಬೀಸಿದ ಗಾಳಿ ಸಹಿತ ಮಳೆಗೆ ಹಲವೆಡೆ ಮನೆಗಳಿಗೆ ಹಾನಿಯಾದ ವರದಿಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಬುಧವಾರವೂ ಆಗೊಮ್ಮೆ ಈಗೊಮ್ಮೆ ಮಳೆಯಾದ ವರದಿಯಾಗಿದೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳಲ್ಲಿ ಸ್ವಲ್ಪಪ್ರಮಾಣದಲ್ಲಿ ಮಳೆಯಾಗಿದೆ. ಜಿಲ್ಲಾದ್ಯಂತ ಮೋಡ ಕವಿದ ವಾತವರಣ ನಿರ್ಮಾಣವಾಗಿದೆ. ಮಂಗಳವಾರದ ಮಳೆ ಗಾಳಿಗೆ ಜಿಲ್ಲೆಯಲ್ಲಿ 4 ಮನೆಗಳು ಬಿದ್ದು, ಸುಮಾರು 1.95 ಲಕ್ಷ ರು. ನಷ್ಠವಾಗಿದೆ. ಮೂಡಿಗೆರೆ ತಾಲೂಕು ಬಾಳೂರು ಹೋಬಳಿ ಕೂವೆ ಗ್ರಾಮದ ಲ್ಯಾಸಿ ರೋಬೋ ಎಂಬವರ ಕಚ್ಚಾ ಮನೆಯ ಮೇಲೆ ಮರ ಬಿದ್ದ ಪರಿಣಾಮ ಶೇ.50 ರಷ್ಟು ಕುಸಿದು ಸುಮಾರು 60 ಸಾವಿರ ರೂ. ನಷ್ಠವಾಗಿದೆ ಎಂದು ತಿಳಿದು ಬಂದಿದೆ. 

ಶೃಂಗೇರಿ ತಾಲೂಕು ಕಸಬಾ ಹೋಬಳಿ ಕೊಟುಗೋಡು ಗ್ರಾಮದಲ್ಲಿ ಲಕ್ಷ್ಮಿ ಎಂಬುವವರ ಮನೆಯ ಗೋಡೆ ಬಿದ್ದಿದ್ದು, 15 ಸಾವಿರ ರು. ನಷ್ಠವಾಗಿದೆ. ಕಿಗ್ಗಾ ಹೋಬಳಿ ಎಡದಹಳ್ಳಿ ಗ್ರಾಮದ ಶಿಲ್ಪ ಎಂಬವರ ಮನೆಯ ಮೇಲೆ ಮರ ಬಿದ್ದು 70 ಸಾವಿರ ರೂ. ನಷ್ಠವಾಗಿದೆ. ಕೊಪ್ಪ ತಾಲೂಕಿನ ಹತ್ತಿಕೊಡಿಗೆ ಗ್ರಾಮದ ಮರಸಲಿನ್ ಡಿಸೋಜ ಎಂಬುವವರ ಕಚ್ಚಾ ಮನೆ ಮಳೆಯಿಂದಾಗಿ ಕುಸಿದಿದ್ದು, 50 ಸಾವಿರ ರೂ. ನಷ್ಠವುಂಟಾಗಿದೆ.

ಇನ್ನು ಕಳೆದೊಂದು ತಿಂಗಳಿನಿಂದ ಸುರಿದ ಮಳೆ ಹಾಗೂ ಎರಡು ದಿನಗಳ ಹಿಂದೆ ಬೀಸಿದ ಗಾಳಿಗೆ ಮಲೆನಾಡಿನಲ್ಲಿ ಸಾವಿರಾರು ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು, ತಂತಿಗಳ ಮೇಲೆಯೆ ಹೆಚ್ಚು ಮರಗಳು ಉರುಳಿದ ಪರಿಣಾಮ ಮಲೆನಾಡಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದೆ. ಮುರಿದ ವಿದ್ಯುತ್ ಕಂಬಗಳ ಬದಲಿಗೆ ಹೊಸ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಮೆಸ್ಕಾಂ ಸಿಬ್ಬಂದಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News